ಮರಳು ಸಾಗಾಣಿಕೆ ವ್ಯವಹಾರ ಆಗಬಾರದು : ಬಡವರಿಗೆ ಮರಳು ದೊರೆಯಬೇಕು :
ಜಿಲ್ಲಾಧಿಕಾರಿ ಹರೀಶ್ ಕುಮಾರ್
ಕಾರವಾರ ಅ.22: ಹೊಸ ಮರಳು ನೀತಿ-೨೦೨೦ರ ಅನ್ವಯ ಜಿಲ್ಲೆಯ ಹಳ್ಳ, ಕೊಳ್ಳ, ನದಿ ಹಾಗೂ ಅಣೆಕಟ್ಟಿನ ಹಿನ್ನಿರಿನಲ್ಲಿ ಲಭ್ಯವಿರುವ ಮರಳು ನಿಕ್ಷೇಪವನ್ನು ಗುರುತಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶ ಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಎಸಿ, ತಹಶೀಲ್ದಾರ ಹಾಗೂ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಈ ಹೊಸ ಮರಳು ನೀತಿ ಪ್ರಕಾರ , ಬಡವರಿಗೆ ಮತ್ತು ಸ್ಥಳೀಯರಿಗೆ ದೊರೆಯಬೇಕೆಂಬ ಉದ್ದೇಶದಿಂದ ಹೊಸ ನೀತಿ ಮಾಡಲಾಗಿರುವುದರಿಂದ ಹಳ್ಳ, ಕೊಳ್ಳ, ನದಿ, ಅಣೆಕಟ್ಟಿನ ಹಿನ್ನೀರಿನಲ್ಲಿರುವ ಮರಳು ನಿಕ್ಷೇಪಗಳನ್ನು ಗುರುತಿಸಿ ಅರ್ಹರಿಗೆ ಮರಳು ದೊರಕುವಂತೆ ಮಾಡಿ. ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಮರಳು ಸಾಗಾಣಿಕೆ ದಂಧೆ ಆಗಿ ಮಾರ್ಪಾಡಬಾರದು ಎಂದು ಅವರು ಖಡಕ್ ಆಗಿ ಸೂಚಿಸಿದರು. ರಾಜ್ಯದ ಭೌಗೋಳಿಕ, ಭೂವೈಜ್ಞಾನಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಪರಿಗಣಿಸಿ ಸರ್ಕಾರಿ ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳಿಗೆ ನಿಯಮಿತವಾಗಿ ಮತ್ತು ಸುಲಭವಾಗಿ ಕೈಗೆಟುಕುವ ದರದಲ್ಲಿ ಮರಳು ದೊರೆಯುವಂತೆ ಇರಬೇಕು ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ವೈಜ್ಞಾನಿಕವಾಗಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಹಳ್ಳ, ನದಿ, ಕೆರೆ, ಅಣೆಕಟ್ಟು ಮತ್ತು ಅಣೆಕಟ್ಟಿನ ಹಿನ್ನೀರಿನ ನದಿಪಾತ್ರದಲ್ಲಿನ ಮರಳು ನಿಕ್ಷೇಪಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಹೊಸ ಮರಳು ನೀತಿಯನ್ನು ಪ್ರಸ್ತಾಪಿಸಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಪ್ರಸ್ತಾವನೆಯಂತೆ ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿಯ ಹಳ್ಳ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪಗಳನ್ನು ಕಂದಾಯ, ಅರಣ್ಯ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಗುರುತಿಸಬೇಕು. ನಾಲ್ಕು, ಐದು ಮತ್ತು ಆರನೇ ಕ್ರಮಾಂಕದ ಹೊ¼,ೆ ನದಿ, ಜಲಾಶಯ ಹಾಗೂ ಅಣೆಕಟ್ಟಿನ ಹಿನ್ನೀರಿನ ನದಿಪಾತ್ರದಲ್ಲಿನ ಮರಳು ನಿಕ್ಷೇಪಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಲಸಂಪನ್ಮೂಲ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಬೇಕು. ತಾಲೂಕು ವ್ಯಾಪ್ತಿಗಳಲ್ಲಿ ಬರುವ ಹಳ್ಳ, ತೊರೆ, ಕರೆ, ಹೊಳೆ ಮತ್ತು ಅಣೆಕಟ್ಟಿನ ಹಿನ್ನೀರಿನ ನದಿಪಾತ್ರಗಳಲ್ಲಿ ಹೊಸ ಮರಳು ನೀತಿ-೨೦೨೦ರ ಆದೇಶದಲ್ಲಿ ತಿಳಿಸಿರುವ ಅಂಶಗಳನ್ವಯ ಮರಳು ನಿಕ್ಷೇಪಗಳನ್ನು ಗುರುತಿಸಿ, ತಾಲೂಕು ಮರಳು ಉಸ್ತುವಾರಿ ಸಮಿತಿ ಮೂಲಕ, ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅನುಮೋದನೆಯೊಂದಿಗೆ ತೆರವುಗೊಳಿಸುವಿಕೆಗೆ ಕ್ರಮವಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಸಹಾಯಕ ಕಮಿಷನರ್ ಪ್ರಿಯಾಂಗಾ .ಎಂ ಹಾಗೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರ. ಎಂ ಅವರು ಸೇರಿದಂತೆ ಉಪಸ್ಥಿತರಿದ್ದರು.