ಅಂತರಾಳದ ನೋವಿಗೆ ಸಾಥ್ ನೀಡುವ ಸಂಗಾತಿ ಕವಿತೆ-ಕವಿ ನಾಗೇಶ್ ನಾಯಕ

ಬೈಲಹೊಂಗಲ  25: ಕವಿತೆ ಎಂದರೆ ಅಂತರಾಳದ ನೋವಿಗೆ ಸಾಥ್ ನೀಡುವ ಸಂಗಾತಿ. ಆಕ್ರೋಶಕ್ಕೆ ಪುಟಿದೇಳುವ ಕೆಂಡದುಂಡೆ ಎಂದು ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ, ನಾಗೇಶ್ ಜೆ. ನಾಯಕ ಹುಬ್ಬಳ್ಳಿಯ ನಾಗಸುಧೆ ಜಗುಲಿಯಲ್ಲಿ ಹಮ್ಮಿಕೊಂಡ ಹೊಂಗಿರಣ ಕಾರ್ಯಕ್ರಮದಲ್ಲಿ 'ನಾನು ನನ್ನ ಕವಿತೆ' ಕುರಿತು ಮಾತನಾಡಿದರು.

ನನ್ನ ಬದುಕಿನ ದಟ್ಟ ಅನುಭವಗಳೇ ಕವಿತೆ ಬರೆಯಲು ಕಾರಣ. ಕವಿತೆ ತಪಸ್ಸು, ಧ್ಯಾನ ಇದ್ದ ಹಾಗೆ. ನಿರಂತರ ಓದು, ಶೃದ್ಧೆ, ಅನುಭವಗಳ ಮೂಲಕ ಪ್ರತಿಮೆ ರೂಪಕಗಳಲ್ಲಿ ಅದನ್ನು ಹಿಡಿದಿಡಲು ಸಾಧ್ಯ. ಇಂದು ಯುವಕರಿಗೆ ಕಾವ್ಯಪ್ರಕಟಣೆಗೆ ಅನೇಕ ಮಾರ್ಗಗಳಿದ್ದು ಅದನ್ನು ಅವರು ಉಪಯೋಗಿಸಿಕೊಳ್ಳಬೇಕು. ಕಾವ್ಯಪರಂಪರೆಯನ್ನು ಅಧ್ಯಯನ ಮಾಡುವುದಷ್ಟೇ ಅಲ್ಲದೆ ತಮ್ಮ ಸಮಕಾಲೀನರ ಕವಿತೆಗಳನ್ನೂ ಓದಬೇಕು. ಹಾಗಾದಾಗಲೇ ಸತ್ವಯುತ ಕವಿತೆಗಳು ಅರಳಲು ಸಾಧ್ಯ ಎಂದು ಅವರು ನುಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ಪ್ರಜಾವಾಣಿ ದಿನಪತ್ರಿಕೆಯ ನಿವೃತ್ತ ಪತ್ರಕರ್ತರಾದರಾದ ಅರುಣಕುಮಾರ ಹಬ್ಬು ಮಾತನಾಡಿ ಹಿಂದಿನ ಕಾಲದ ಕವಿಗಳೆಲ್ಲ ಭೌತಿಕವಾಗಿ ಬಡವರಾಗಿದ್ದರೂ ಮಾನಸಿಕವಾಗಿ ಶ್ರೀಮಂತರಾಗಿದ್ದರು. 

ಇಂತಹ ಕಾರ್ಯಕ್ರಮಗಳು ಯುವಪ್ರತಿಭೆಗಳಿಗೆ ವೇದಿಕೆ ಒದಗಿಸಿ ಒಳ್ಳೆಯ ಕೆಲಸ ಮಾಡುತ್ತಿವೆ ಎಂದರು. ಇಪ್ಪತ್ತು ಹಿರಿ-ಕಿರಿಯ ಕವಿಗಳಿಂದ ಕವಿತಾ ವಾಚನ ನಡೆಯಿತು. ಖ್ಯಾತ ಲೇಖಕಿ ಸುನಂದಾ ಕಡಮೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ ಪ್ರಕಾಶ್ ಕಡಮೆ ಸ್ವಾಗತಿಸಿ, ಪರಿಚಯಿಸಿದರು. ರವಿಶಂಕರ ಗಡಿಯಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾಜರ್ುನ ಮೇಟಿ ಕಾರ್ಯಕ್ರಮ ಸಂಯೋಜಿಸಿದರು.