ಲೋಕದರ್ಶನ ವರದಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಭಾವಿ ಸಭೆ; ಪಾರದರ್ಶಕ ಪರೀಕ್ಷೆಗೆ ಸಕಲ ಸಿದ್ದತೆ: ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ..!
ಕಾಗವಾಡ, 17; ಮಾ. 21 ರಿಂದ ಏ. 04ರ ವರೆಗೆ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ನಕಲುಮುಕ್ತ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆಯೆಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ ತಿಳಿಸಿದ್ದಾರೆ.
ಅವರು ಸೋಮವಾರ ದಿ. 17 ರಂದು ಕಾಗವಾಡದ ತಮ್ಮ ಕಾರ್ಯಾಲಯದಲ್ಲಿ ನಡೆದ ಪರೀಕ್ಷೆಯ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ತಾಲೂಕಿನಲ್ಲಿ ಒಟ್ಟು 6 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದ್ದು, ಎಲ್ಲ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳು ಮುಂದಿನ ವಿದ್ಯಾಭ್ಯಾಸಕ್ಕೆ ಮಹತ್ವದ್ದಾಗಿದ್ದು, ನಕಲು ಮುಕ್ತವಾಗಿ ಹಾಗೂ ಅವ್ಯವಹಾರ ನಡೆಯದಂತೆ ಪರೀಕ್ಷೆ ನಡೆಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮುವಂತೆ ನೋಡಿಕೊಳ್ಳಲಾಗುತ್ತಿದೆ. ಶಿಸ್ತು ಕಾಪಾಡಿಕೊಂಡು ಸಮಯಕ್ಕೆ ಮಹತ್ವ ಕೊಟ್ಟು ಸುಸೂತ್ರವಾಗಿ ಪರೀಕ್ಷೆಗಳು ನಡೆಯುವಂತಾಗಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಯಲ್ಲಿ ಒಟ್ಟು 36 ಫ್ರೌಢ ಶಾಲೆಗಳಿಂದ 1254 ಗಂಡು ಹಾಗೂ 1098 ಹೆಣ್ಣು ಹೀಗೇ ಒಟ್ಟು 2352 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮೋಳೆ, ಐನಾಪೂರ, ಉಗಾರ, ಶಿರಗುಪ್ಪಿ, ಕಾಗವಾಡ, ಹಾಗೂ ಶೇಡಬಾಳ ಹೀಗೆ 6 ಪರೀಕ್ಷಾ ಕೇಂದ್ರಗಳನ್ನು ರಚಿಸಿದ್ದು, ಎಲ್ಲ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಕಾಲಕ್ಕೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಗೆ 144 ಕಲಂ ಜಾರಿಗೊಳಿಸಲಾಗಿದ್ದು, ತಾಲೂಕಾ ಮಟ್ಟದ 3 ಜಾಗೃತ ತಂಡ ರಚಿಸಲಾಗಿದೆ. ಅಲ್ಲದೆ ಪ್ರತಿ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪರೀಕ್ಷೆಗಳು ಬರೆಯಲು ಉತ್ತಮ ಡೆಸ್ಕ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ವಿಶೇಷಚೇತನರಿಗೆ ರಾ್ಯಂಪ್ ವ್ಯವಸ್ಥೆ ಹಾಗೂ ಹಾಗೂ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಆರೋಗ್ಯ ಸಹಾಯಕಿಯರನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮಾದ್ಯಮದವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ತಾ.ಪಂ. ಎಈ ವೀರಣ್ಣ ವಾಲಿ, ಗ್ರೇಡ-2 ತಹಸೀಲ್ದಾರ ರಶ್ಮೀ ಜಕಾತಿ, ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಸುಣ್ಣದಕಲ್ಲ, ಎಎಸ್‌ಐ ಎಸ್.ಬಿ. ಸೋನಾವನೆ ಉಪಸ್ಥಿತರಿದ್ದರು.