ನೈರುತ್ಯ ರೈಲ್ವೆಯಿಂದ ಕೊರೋನಾ ವೈರಸ್ ಜನಜಾಗೃತಿ

ಬೆಂಗಳೂರು, ಮಾ 11, ಕೊರೋನಾ ವೈರಸ್ ಕೂವಿಡ್ 19 ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನೈರುತ್ಯ ರೈಲ್ವೆ ತೊಡಗಿಕೊಂಡಿದೆ.  ಕೊರೋನಾ ವೈರಸ್ ಹರಡದಂತೆ ಕೈಗೊಳ್ಳಬೇಕಿರುವ ಮುಂಜಾಗ್ರತೆಯ ವಿವರಗಳುಳ್ಳ  ಪೋಸ್ಟರ್ ಳನ್ನು ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ, ಮತ್ತಿತರೆಡೆಗಳಲ್ಲಿ ಅಂಟಿಸಲಾಗಿದೆ. ನಿಲ್ದಾಣದಲ್ಲಿರುವ ಟಿವಿಗಳಲ್ಲಿಯೂ ವೈರಸ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ನೈರುತ್ಯ ರೈಲ್ವೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪೋಸ್ಟರ್ ಹಾಗೂ ವಿಡಿಯೋ ತುಣುಕುಗಳನ್ನು ಹಾಕಿ ಜಾಗೃತಿ ಮೂಡಿಸುತ್ತಿದೆ. ಕೆಮ್ಮು ಹಾಗೂ ಜ್ವರದ ಲಕ್ಷಣ ಇರುವ ಪ್ರಯಾಣಿಕರ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಸೆಂಟ್ರಲ್ ಆಸ್ಪತ್ರೆ, ಬೆಂಗಳೂರು ಹಾಗೂ ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿ ನಿರ್ಮಿಸಲಾಗಿದೆ. ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ೭೦೬ ಹಾಸಿಗೆಗಳ ೨೨೯ ಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕೊರೋನಾ ವೈರಸ್ ಶಂಕಿತರಿಗೆ ನೀಡುವುದಕ್ಕಾಗಿ ಮಾಸ್ಕ್, ಗ್ಲೌಸ್, ಕ್ಯಾಪ್, ಹ್ಯಾಂಡ್ವಾಶ್ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ಸಂಗ್ರಹಿಸಲಾಗಿದೆ.ಈ ಮಧ್ಯೆ ಕೊರೋನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯಬೇಕಾಗಿದ್ದ ವಿಚಾರ ಸಂಕಿರಣ ಸಮಾರಂಭಗಳನ್ನು ಮುಂದೂಡಲಾಗಿದೆ. ವಿಶ್ವವಿದ್ಯಾಲಯದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ನಿಗದಿಯಂತೆ ವಿಶ್ವವಿದ್ಯಾಲಯದ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳಲ್ಲಿ ಗೊಂದಲ ಬೇಡ ಎಂದು ಕುಲಪತಿ ಪ್ರೊಫೆಸರ್ ಹೇಮಂತ ಕುಮಾರ್ ತಿಳಿಸಿದ್ದಾರೆ.