ಬೆಂಗಳೂರು,ಸೆ 22 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬರುವ ಮುನ್ನವೇ ನಾನು ಶಾಸಕನಾಗಿದ್ದೆ.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಅವರು ತಮಗೆ ಟಿಕೆಟ್ ನೀಡಿದ್ದು ಸಿದ್ದರಾಮಯ್ಯ ಅಲ್ಲ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.
ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಹೊಸಕೋಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಎಂಟಿಬಿ ನಾಗರಾಜ್ ಮೇಲೆ ಹೊರಿಸಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರ ಆರೋಪ ಶುದ್ದ ಸುಳ್ಳು ಎಂದಿದ್ದಾರೆ.
ನನ್ನ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಅವರಿಗೆ ಇಲ್ಲ. ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕ ಕೂಡ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ. ಎಲ್ಲರ ಬಂಡವಾಳ ನನಗೆ ಗೊತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುರುಬರನ್ನ ಗಣನೆಗೆ ತೆಗೆದುಕೊಂಡಿಲ್ಲ. ಮೇಟಿ ಕೆಲವು ದಿನಗಳು ಮಂತ್ರಿಯಾಗಿದ್ದರು,ಕೊನೆಯ ಹಂತದಲ್ಲಿ ಎಚ್.ಎಂ.ರೇವಣ್ಣನಿಗೆ ಮಂತ್ರಿ ಸ್ಥಾನ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.
2007 ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಸೇರಿದರು.ನಾನು 2004ರಲ್ಲಿಯೇ ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದೆ .ರಮೇಶ್ ಕುಮಾರ್, ಕೃಷ್ಣ ಭೈರೇಗೌಡ ಯಾವ ಪಕ್ಷದಿಂದ ಕಾಂಗ್ರೆಸ್ ಬಂದಿದ್ದಾರೆ..? ಅವರೂ ಕೂಡಾ ಬೇರೆ ಕಡೆ ಮದುವೆಯಾಗಿ ಕಾಂಗ್ರೆಸ್ಗೆ ಬಂದು ಸಂಸಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೈರತಿ ಸುರೇಶ್ ಇನ್ನೂ ರಾಜಕೀಯದಲ್ಲಿ ಬಚ್ಚಾ.ಅವನ ಬಂಡವಾಳ ತಮಗೆ ಗೊತ್ತು. ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಸಾವನ್ನಪ್ಪಲು ಬೈರತಿ ಸುರೇಶ್ ನೇರ ಕಾರಣ. ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್ .ಇನ್ನು 50 ವರ್ಷ ಬದುಕಿ ಬಾಳಬೇಕಿದ್ದ ರಾಕೇಶ್ ನನ್ನು ಹೊಟೇಲಿಗೆ ಕರೆದೊಯ್ದು ಆತನನ್ನು ಹಾಳು ಮಾಡಿ ಸಾಯಿಸಿದ್ದು ನನಗೆ ಗೊತ್ತಿದೆ ಎಂದು ನಾಗರಾಜ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ನಾಯಕರು ತಮ್ಮ ಬಳಿಕ ಹಣಕಾಸಿನ ಸಹಾಯ ಪಡೆದಿದ್ದಾರೆ. ಅಸಲನ್ನೇ ತುಂಬಾ ಜನರು ವಾಪಸ್ ನೀಡಿಲ್ಲ ಇನ್ನು ಬಡ್ಡಿಯನ್ನು ಎಲ್ಲಿ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಎಂಟಿಬಿ ನಾಗರಾಜ್ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಭೈರತಿ ಸುರೇಶ್, ರಾಕೇಶ್ ಸಿದ್ದರಾಮಯ್ಯ ನನ್ನ ತಮ್ಮನಿದ್ದಂತೆ. ಅವನ ಸಾವಿಗೆ ನಾನೇಕೆ ಕಾರಣವಾಗಲಿ, ಹತಾಶೆ ಮನೋಭಾವದಿಂದ ಎಂಟಿಬಿ ನಾಗರಾಜ್ ಇಂತಹ ಹೇಳಿಕೆ ನೀಡಿದ್ದಾರೆ. ಒಂದು ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಅವರ ಸೋಲಿನ ಭೀತಿ ಕಂಡು ಬರುತ್ತಿದೆ ಎಂದರು.
ರಾಕೇಶ್ ಸಾವಿಗೆ ಸಿದ್ದರಾಮಯ್ಯ ನವರು ಉತ್ತರ ನೀಡಬೇಕಿದೆ. ಎಂಟಿಬಿ ನಾಗರಾಜ್ ಮೂರನೇ ವ್ಯಕ್ತಿ ಆತನಿಗೆ ಯಾವ ಹಕ್ಕಿದೆ. ನಾನು ಗ್ರಾಪಂ ಸದಸ್ಯನಾಗಿದ್ದಾಗ ಎಂಟಿಬಿ ನಾಗರಾಜ್ ಎಲ್ಲಿದ್ದರು ಎನ್ನುವುದನ್ನು ತಿಳಿದುಕೊಳ್ಳಲಿ, ಗ್ರಾಪಂ ಸದಸ್ಯನಿಂದ ಹಿಡಿದು ಈಗ ಶಾಸಕನಾಗಿದ್ದೇನೆ, ನಾನು ಬಚ್ಚಾ ಅಲ್ಲ ಎಂದು ಅವರು ಕಿಡಿಕಾರಿದರು.
ಬೇರೆ ಮನೆಯಿಂದ ಬಂದು ಕಾಂಗ್ರೆಸ್ ನಲ್ಲಿ ವಾಸ ಎನ್ನುತ್ತೀರಲ್ಲಾ ನೀವು ಹೀಗ ಮಾಡುತ್ತಿರುವುದಾದರೂ ಏನೂ, ಹೊಸಕೋಟೆಯಲ್ಲಿ ಬಚ್ಚೇಗೌಡ ಅವರು ಕಟ್ಟಿ ಬೆಳಿಸಿದಂತಹ ಮನೆಯಲ್ಲಿ ನೀವು ವಾಸ ಮಾಡಲು ಹೊರಟಿರುವುದು ಸರೀಯೇ. ಸಿದ್ದರಾಮಯ್ಯ ಅವರನ್ನು ಟೀಕಿಸಲು ನಿಮಗೆ ಯಾವುದೇ ನೈತಿಕತೆ ಇಲ್ಲ, ನಿಮ್ಮ ಬಂಡವಾಳ ನೀವು ನಡೆಸಿರುವ ಹಗರಣಗಳ ಬಗ್ಗೆ ನಮಗೂ ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಟ್ಟಿಗೆ,ಕಲ್ಲು,ಸಿಮೆಂಟ್ ಮಾರಿಕೊಂಡಿದ್ದ ಎಂಟಿಬಿ ನಾಗರಾಜ್ ಎಷ್ಟು ಜನರ ಮನೆಗಳನ್ನುಹಾಳು ಮಾಡಿದ್ದಾನೆ ಎಂದು ತಿಳಿದಿದೆ.ಎಷ್ಟು ಜನರ ಕುಟುಂಬಗಳು ಈತನ ಬಡ್ಡಿ ಶೂಲಕ್ಕೆ ಸಿಲುಕಿ ಹಾಳಾಗಿವೆ ಎಂಬುದನ್ನು ಕ್ಷೇತ್ರದ ಜನತೆ ಅರಿತುಕೊಳ್ಳುತ್ತಾರೆ ಎಂದು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.