ಹೈಕಮಾಂಡ್ ಧೋರಣೆಗೆ ಹಿರಿಯರ ಬೇಸರ: ಭೇಟಿಗೆ ನಿರ್ಧಾರ

ಬೆಂಗಳೂರು, ಮಾ.7,ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವುದು ಕಷ್ಟ ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದ್ದು, ರಾಜ್ಯ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಈ ಕುರಿತು ಹೈಕಮಾಂಡ್ ಭೇಟಿಗೆ ನಿರ್ಧರಿಸಿದ್ದಾರೆ.ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸಿದ್ದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಝಾದ್ ಪಕ್ಷದ ಕೆಲವು ಹಿರಿಯ ನಾಯಕರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರ ವಿರೋಧ ಕಡೆಗಣಿಸಿ ಅಧ್ಯಕ್ಷರ ನೇಮಕ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದು, ಅಲ್ಲದೇ ಅವರ ವಿರೋಧ ಕಟ್ಟಿಕೊಂಡು ಪಕ್ಷ  ಯಾವುದೇ ನಿರ್ಧಾರ ಕೈಗೊಳ್ಳುವುದು ಕಷ್ಟ ಎಂಬ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಬೇಕೆಂದು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು. ಅದರಂತೆ ಹೈಕಮಾಂಡ್ ಕೂಡ ಅವರ ನೇಮಕಕ್ಕೆ ಸಹಮತ ವ್ಯಕ್ತಪಡಿಸಿತ್ತು ಎಂಬ ಮಾತುಗಳೂ ಕೇಳಿ ಬಂದಿದ್ದವು. ಆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿ ಡಿ.ಕೆ.ಶಿವಕುಮಾರ್ ಅವರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷರನ್ನಾಗಿ ಮಾಡಬಾರದು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಅಭಿಪ್ರಾಯ ಪಡೆಯಲು ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ಗುಲಾಂ ನಬಿ ಆಝಾದ್, ಸಿದ್ದರಾಮಯ್ಯ ಅವರನ್ನು ನಿರ್ಲಕ್ಷ್ಯ ಮಾಡಿ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿದರೆ, ಪಕ್ಷ ಇಬ್ಭಾಗವಾಗುವ ಸಾಧ್ಯತೆ ಇದೆ. ಈ ವೇಳೆ ಪಕ್ಷ ಅವರನ್ನು ಕಡೆಗಣಿಸಿ ಯಾವುದೇ ನಿರ್ಧಾರ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಪಕ್ಷದ ಹಿರಿಯ ನಾಯಕರಾದ ಎಂ.ವೀರಪ್ಪ ಮೊಯ್ಲಿ, ಡಾ.ಜಿ.ಪರಮೇಶ್ವರ್, ಎಚ್.ಕೆ. ಪಾಟೀಲ್ ಅವರನ್ನು ಭೇಟಿ ಮಾಡಿ ಹೈಕಮಾಂಡ್ ನಿಲುವು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.

ಹೈಕಮಾಂಡ್ನ ಈ ನಿರ್ಧಾರದಿಂದ ಪಕ್ಷದ ಹಿರಿಯ ನಾಯಕರು ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಚರ್ಚಿಸಲು ಸಮಯ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಡಾ.ಜಿ.ಪರಮೇಶ್ವರ್ ಸಮಯ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.ಕೆಪಿಸಿಸಿ ಅಧ್ಯಕ್ಷರ ನೇಮಕದಿಂದ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಪಕ್ಷ ಸಂಘಟಿತವಾಗಿ ಹೋರಾಟ ಮಾಡದೇ ಇರುವ ಬಗ್ಗೆ ಪಕ್ಷ ತಳ ಹಂತದ ನಾಯಕರಿಂದ ಹಿಡಿದು ಹಿರಿಯ ನಾಯಕರಿಗೆ ಅಸಮಾಧಾನ ಉಂಟಾಗಿದೆ. ಈ ಬಗ್ಗೆ ಹಿರಿಯ ನಾಯಕ ರಮೇಶ್ ಕುಮಾರ್ ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿಯೂ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ.ಸಿಎಎ ಹಾಗೂ ಎನ್ಆರ್ಸಿ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ನಿಂದ ಯಾವುದೇ ಪ್ರತಿಭಟನೆಗಳು ನಡೆಯದಿರುವ ಬಗ್ಗೆ ಅಲ್ಪ ಸಂಖ್ಯಾತ ವರ್ಗದವರೂ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಪಕ್ಷದ ವೇದಿಕೆಗಳಲ್ಲಿ ಚರ್ಚಿಸಲು ಯಾರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂಬ ಅಸಹಾಯಕತೆಯನ್ನು ಅಲ್ಪ ಸಂಖ್ಯಾತ ನಾಯಕರು ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದು ಬಂದಿದೆ. ದಿನೇಶ್ ಗುಂಡೂರಾವ್ ಮುಂದುವರಿಕೆ ಗೊಂದಲ: ಹೈಕಮಾಂಡ್ ಭೇಟಿಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ವಿಳಂಬವಾಗುತ್ತಿರುವುದರಿಂದ ಸಕ್ರೀಯರಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ರಾಜೀನಾಮೆ ಸಲ್ಲಿಸಿರುವ ದಿನೇಶ್ ಗುಂಡೂರಾವ್ ಅವರಿಗೆ ಹೈಕಮಾಂಡ್ ಸೂಚಿಸಿತ್ತು ಎನ್ನಲಾಗಿದೆ.

ಆದರೆ, ಪಕ್ಷದ ನಾಯಕರ ನಡವಳಿಕೆಯಿಂದ ಬೇಸತ್ತಿರುವ ದಿನೇಶ್ ಗುಂಡೂರಾವ್, ಅರ್ಥವಿಲ್ಲದೇ ಹುದ್ದೆಯಲ್ಲಿ ಮುಂದುವರಿಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಕ್ರಿಯ ಚಟುವಟಿಕೆಯಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈ ಬೆಳವಣಿಗೆ ಬಗ್ಗೆಯೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಚರ್ಚಿಸಲು ದೆಹಲಿಗೆ ತೆರಳಿದ್ದ ದಿನೇಶ್ ಗುಂಡೂರಾವ್ಗೆ ತಾತ್ಕಾಲಿಕವಾಗಿ ಅಧ್ಯಕ್ಷರಾಗಿ ಮುಂದುವರಿಯುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷದ ಪದಾಧಿಕಾರಿಗಳಿಲ್ಲದೇ ಪಕ್ಷದ ಚಟುವಟಿಕೆ ನಡೆಸುವುದು ಕಷ್ಟ ಎಂದು ದಿನೇಶ್ ಗುಂಡೂರಾವ್ ಹೈಕಮಾಂಡ್ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.