ಮೇಲ್ಮನೆಯಲ್ಲಿ ಪ್ರತಿಧ್ವನಿಸಿದ ಶಿಕ್ಷಕರ ಮೇಲಿನ ದೇಶದ್ರೋಹ ಪ್ರಕರಣ: ವಿಪಕ್ಷದಿಂದ ಧರಣಿ, ಕಲಾಪ ಮುಂದೂಡಿಕೆ

ಬೆಂಗಳೂರು,ಫೆ.20, ಬೀದರ್  ಶಾಹೀನ್ ಶಾಲೆಯ ಶಿಕ್ಷಕರ ಮೇಲೆ ದಾಖಲಿಸಲಾಗಿರುವ ದೇಶದ್ರೋಹದ ಪ್ರಕರಣವನ್ನು ಸರ್ಕಾರ  ಹಿಂಪಡೆಯುವಂತೆ ಒತ್ತಾಯಿಸಿ ಧರಣಿ ನಡೆಸಿದ ಪರಿಣಾಮ ವಿಧಾನ ಪರಿಷತ್ ಕಲಾಪ ಅರ್ಧ ದಿನಕ್ಕೆ  ಮುಂದೂಡಲಾಯಿತು.ನಿಯಮ 68ರ ಅಡಿಯಲ್ಲಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತ ಚರ್ಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡಿ,ಬೀದರ್  ಶಾಹೀನ್ ಶಾಲೆ ಪ್ರಕರಣಕ್ಕೆ ಸ್ಪಷ್ಟನೆಗೆ ಮುಂದಾದರು.  ದೂರು ನೀಡಿದಾಗ ಎಫ್ಐಆರ್ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. 

ಅದರಂತೆ ಸೆಕ್ಷನ್  124 ಅಡಿ ದೇಶದ್ರೋಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಟಕ ಪ್ರದರ್ಶಿಸಿದ  ಮಕ್ಕಳನ್ನು ತನಿಖೆಗೊಳಪಡಿಸಲಾಗಿದೆ ಎಂದರು.ನಾವು ಮಕ್ಕಳ ಮೇಲೆ ಕೇಸ್  ಹಾಕಿಲ್ಲ. ಇದು ದೇಶದ್ರೋಹದ  ಪ್ರಕರಣವನ್ನು ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಯುಪಿಎ  ಎನ್ಡಿಎ ಸರ್ಕಾರದಲ್ಲಿಯೂ ಬಳಕೆ ಮಾಡಲಾಗಿದೆ. ಯುಪಿಎ ಸರ್ಕಾರದಲ್ಲಿ 9 ಸಾವಿರ ದೇಶದ್ರೋಹ  ಕೇಸು ದಾಖಲಾಗಿವೆ. ಪ್ರಚೋದನಕಾರಿಯಾಗಿ ಮೋದಿ ಮತ್ತು ಅವರಪ್ಪನ ದಾಖಲೆಗಳಿವೆಯೇ?  ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಮಗುವಿನ ಬಾಯಿಯಲ್ಲಿ ಹೇಳಿಸಲಾಗಿದೆ ಎಂದರು.ಆಗ  ಮಧ್ಯಪ್ರವೇಶಿಸಿದ ಕಾಂಗ್ರೆಸಿನ ಸಿ.ಎಂ. ಇಬ್ರಾಹಿಂ, ಗೊತ್ತಿಲ್ಲದ ಮಗು ಹೇಳಿದ್ದಕ್ಕೆ ಅದರ ತಾಯಿ  ಮತ್ತು ಶಿಕ್ಷಕಿಯ ಮೇಲೆ ಕ್ರಮ ಏಕೆ? ಬೀದರ್ ಪ್ರಕಣವನ್ನು ಪುನರ್ಪರಿಶೀಲನೆ ಮಾಡುತ್ತೇವೆ  ಎಂದು ಒಮ್ಮೆ ಹೇಳಿಬಿಡಿ ಎಂದು ಗೃಹ ಸಚಿವರನ್ನು ಒತ್ತಾಯಿಸಿದರು.

ಇದಕ್ಕೆ  ಜೆಡಿಎಸ್ನ ಭೋಜೇಗೌಡ ಹಾಗೂ ಶ್ರೀಕಂಠೇಗೌಡ ಸಹ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ  ಬಿಜೆಪಿ ಸದಸ್ಯರು ವಿಪಕ್ಷಗಳ ಮೇಲೆ ಮುಗಿಬಿದ್ದರು. ತೇಜಸ್ವಿನಿಗೌಡ, ಮಗುವನ್ನು  ಪ್ರಚೋದನಕಾರಿ ಹೇಳಿಕೆಗೆ ಬಳಸಿದವರ ವಿರುದ್ಧ ನಾಟಕ ಬರೆದವರ ಮಾಡಿಸಿದವರ ವಿರುದ್ಧ ಸೂಕ್ತ  ತನಿಖೆಯಾಗಬೇಕು. ಮಗುವಿನ ಬಾಯಿಯಿಂದ ದೇಶದ್ರೋಹದ ಮಾತುಗಳನ್ನು ಹೇಳಿಸಿರುವುದು ಅಪರಾಧ  ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ವಿಪಕ್ಷ  ಸದಸ್ಯರ ಮಧ್ಯೆ ತಾರಕಕ್ಕೇರಿತು.ಶಿಕ್ಷಕರ ಮೇಲಿನ ದುರುದ್ದೇಶಪೂರಕ ದೇಶದ್ರೋಹದ  ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ವಿಪಕ್ಷ ಸದಸ್ಯರು ಸಭಾಪತಿ ಪೀಠದ ಮುಂಭಾಗ  ಧರಣಿಗೆ ಮುಂದಾದರು.ಸಭನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ದೇಶದಲ್ಲಿ ಇದೇ ಮೊದಲ  ಬಾರಿಗೆ ಶಿಕ್ಷಕರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಶಿಕ್ಷಣ  ಸಂಸ್ಥೆಗಳು ದೇಶದ್ರೋಹ ಕಲಿಸುವುದಿಲ್ಲ. ಇದು ಕರ್ನಾಟಕಕ್ಕೆ ಕಪ್ಪುಚುಕ್ಕೆ. ಹೀಗಾಗಿ  ಶಿಕ್ಷಕಿಯರ ಮೇಲಿನ ಕೇಸನ್ನು ಹಿಂಪಡೆಯಬೇಕು ಎಂದರು.ಆಗ ಜೆಡಿಎಸ್ನ ಬಸವರಾಜ ಹೊರಟ್ಟಿ  ಮಾತನಾಡಿ, ಶಿಕ್ಷಕರ ಮೇಲೆ ಮಗುವಿನ ತಾಯಿ ಮೇಲಿನ ಪ್ರಕರಣ ಹಿಂಪಡೆದು ಸರ್ಕಾರ ಮುಂದಿನ  ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು ಎಂದರು. ಇದಕ್ಕೂ ಬಿಜೆಪಿ ಒಪ್ಪದಿದ್ದಾಗ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.