ಬೆಂಗಳೂರು, ಫೆ.20, ಪತ್ರಕರ್ತ ಸಿರಾಜ್ ಬಿಸರಳ್ಳಿ ಹಾಗೂ ರಾಜ್ ಭಕ್ಷಿಯವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿರುವುದು ರಾಜ್ಯದ ಬಿಜೆಪಿ ಸರ್ಕಾರ ಎಷ್ಟೊಂದು ಹತಾಶವಾಗಿದೆ ಎಂದು ಬಿಂಬಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುತ್ತಿರುವ ಸರಕಾರದ ಈ ನಡೆಯು ದಬ್ಬಾಳಿಕೆಯಾಗಿದ್ದು ಸಿರಾಜ್ ರವರ ಕವನದಲ್ಲಿರುವ ಧಾರ್ಮಿಕ ಪ್ರಶ್ನೆಗಳನ್ನು ಎದುರಿಸುವ ಯಾವುದೇ ಸಾಮರ್ಥ್ಯ ಸರಕಾರಕ್ಕಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.
ಸಿಎಎ/ಎನ್ಆರ್ಸಿ/ಎನ್ಪಿಆರ್ ಸಂಬಂಧಿಸಿದಂತೆ ದೇಶದಲ್ಲೆಡೆ ನಿರಂತರವಾಗಿ ಪ್ರತಿಭಟನೆಗಳು ಭುಗಿಲೆದ್ದಿವೆ. ಜನರ ಆಕ್ರೋಶ ತಣಿಯುವ ಯಾವುದೇ ಲಕ್ಷಣವು ವ್ಯಕ್ತವಾಗುತ್ತಿಲ್ಲ. ಮಹಿಳೆಯರು, ವೃದ್ಧರು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಜನರು ಬೀದಿಗೆ ಬಂದಿದ್ದಾರೆ, ಶಾಹಿನ್ಬಾಗ್ನ ಮಹಿಳೆಯರು ಇಡೀ ದೇಶದ ಜನರಿಗೆ ಮಾದರಿಯಾಗಿದ್ದಾರೆ. ಪ್ರತಿಭಟನೆಗಳು ವಿವಿಧ ರೂಪ-ಹರಿವನ್ನು ಹೊಂದುತ್ತಾ ನಿರಂತರತೆಯೊಂದಿಗೆ ಮುಂದುವರಿಯುತ್ತಿದೆ. ಜನವಿರೋಧಿ, ಸಂವಿಧಾನ ವಿರೋಧಿ ಸಿಎಎ/ಎನ್ಆರ್ಸಿ/ಎನ್ಪಿಆರ್ ಮೂಲಕ ದೇಶವನ್ನು ಒಡೆಯುವ ಸರಕಾರದ ಕ್ರಮವನ್ನು ಇಡೀ ದೇಶದ ಜನತೆ ಒಟ್ಟಾಗಿ ತಿರಸ್ಕರಿಸಿದೆ. ಇದು ದೇಶದ 2ನೆಯ ಸ್ವಾತಂತ್ರ್ಯ ಸಂಗ್ರಾಮವೆಂದು ದೇಶದ ಜನತೆ ಪರಿಗಣಿಸಿದ್ದು ಈ ಹೋರಾಟವನ್ನು ಶಕ್ತಿಮೀರಿ ದಮನಿಸಲು ಹೋರಾಟಿರುವ ಸರಕಾರದ ಕಪಟ ನೀತಿಯು ಖಂಡಿತವಾಗಿಯೂ ಯಶಸ್ವಿಯಾಗಲಾರದು ಎಂದು ಅವರು ತಿಳಿಸಿದರು.
ರಾಜ್ಯದ ಶಾಸಕರಾದ ಸೋಮಶೇಕರ್ ರೆಡ್ಡಿ, ಸಿಟಿ ರವಿ, ರೇಣುಕಾಚಾರ್ಯ, ಸಂಸದರಾದ ಅನಂತ್ಕುಮಾರ್ ಹೆಗ್ಡೆ, ಪ್ರತಾಪಸಿಂಹ, ಮುಂತಾದವರು ಸಂವಿಧಾನ, ಕಾನೂನು ಹಾಗೂ ಇಲ್ಲಿನ ಬಹುತ್ವಕ್ಕೆ ಯಾವುದೇ ಬೆಲೆ ನೀಡದೆ ಹಿಂಸೆ, ಕೊಲೆ ಹಾಗೂ ಜನಾಂಗೀಯವಾದವನ್ನು ಪ್ರಚೋದಿಸುವ ಹೇಳಿಕೆಗಳು, ಭಾಷಣಗಳನ್ನು ನೀಡುತ್ತಿದ್ದು, ಅವರ ಮೇಲೆ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸುವುದು ಸೂಕ್ತವಾಗಿದೆ. ಹಾಗಿದ್ದರೂ ಸರಕಾರ ಅಂತಹವರ ಮೇಲೆ ಕ್ರಮಕೈಗೊಳ್ಳದೆ ಪ್ರತಿಕ್ರಿಯಿಸುವ ಹಾಗೂ ಪ್ರತಿಭಟಿಸುವ ಜನರ ಮೇಲೆ ದೇಶದ್ರೋಹದ ಕೇಸುಗಳನ್ನು ದಾಖಲಿಸುವುದು ರಾಜ್ಯದ ಹಾಗೂ ದೇಶದ ಜನತೆ ಎಂದೂ ಕ್ಷಮಿಸುವುದಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕ್ರಿಯಿಸಿದ್ದಾರೆ.