ದಾವಣಗೆರೆ, ಫೆ.22: ದೇಶದ್ರೋಹಿ ಘೋಷಣೆಯ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಇದರ ಹಿಂದೆ ಹಲವು ಸಂಘಟನೆಗಳು , ಹಲವು ಜನರು ಇದ್ದಾರೆ. ಈ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಡೆಯುವ ಸಭೆಯಲ್ಲಿ ಈ ಷಡ್ಯಂತ್ರದ ಬಗ್ಗೆ ತನಿಖೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ದೇಶದ್ರೋಹಿಗಳಿಗೆ ಬೆಂಬಲ ನೀಡುವವರ ವಿಚಾರದ ಬಗ್ಗೆಯೂ ತನಿಖೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಕಲಬುರಗಿಯಲ್ಲಿ ಎಐಎಂಐಎಂ ನಾಯಕ ವಾರಿಸ್ ಪಠಾಣ್ ವಿರುದ್ಧ ದೂರು ದಾಖಲಿಸಲು ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಈಗಾಗಲೇ ಕಲಬುರಗಿ ಪೊಲೀಸ್ ಆಯುಕ್ತರ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಪಠಾಣ್ ವಿರುದ್ಧವೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.ಶಾಸಕರ ಭವನಕ್ಕೆ ಮಾಧ್ಯಮ ನಿರ್ಬಂಧ ವಿಚಾರದ ಬಗ್ಗೆ ಹೇಳಿದ ಅವರು, ಅದು ಸ್ಪೀಕರ್ ವ್ಯಾಪ್ತಿಯಲ್ಲಿದೆ. ಈ ಬಗ್ಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಾರಿಕೊಂಡರು.