ಕರ್ನಾಟಕ ವಿಧಾನಮಂಡಲದ ಎಸ್ಸಿ ಎಸ್ಟಿ ಕಲ್ಯಾಣ ಸಮಿತಿಯ ಮೊದಲನೇ ವರದಿ ಸರ್ಕಾರಕ್ಕೆ ಸಲ್ಲಿಕೆ: ಪಿ.ಎಂ.ನರೇಂದ್ರಸ್ವಾಮಿ
ಸುವರ್ಣಸೌಧ 13: ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2024-25ನೇ ಸಾಲಿನ ಮೊದಲನೇ ವರದಿಯನ್ನು ಡಿಸೆಂಬರ್ 12ರಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನಗಳಲ್ಲಿ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಆಗಿರುವ ವಿಧಾನಸಭೆ ಸದಸ್ಯರಾದ ಪಿ.ಎಂ. ನರೇಂದ್ರಸ್ವಾಮಿ ಅವರು ಹೇಳಿದರು.
ಸುವರ್ಣಸೌಧದ ಪಶ್ಚಿಮದ್ವಾರದ ಬಳಿ ಸಮಿತಿಯ ಸದಸ್ಯರೊಂದಿಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಈ ಮಾಹಿತಿ ನೀಡಿದರು.
ಸಮಿತಿಯು ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಗದಗ, ಧಾರವಾಡ, ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಮಾಡಿ ಅನೇಕ ಲೋಪದೋಷಗಳನ್ನು ಪರೀಶೀಲಿಸಿದೆ. ಒಂದೇ ಮನೆಯ ಮಕ್ಕಳಂತೆ ಎಲ್ಲ ಪಕ್ಷದವರು ಒಗ್ಗೂಡಿ ಈ ವರದಿಯನ್ನು ಸಿದ್ಧಪಡಿಸಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಎಸ್ಸಿ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಹಾಗೂ ಅವರ ಭವಿಷ್ಯತ್ತನ್ನು ರೂಪಿಸುವುದಕ್ಕೆ ಸರ್ಕಾರದ ಯೋಜನೆಗಳು ಸಮರ್ಕವಾಗಿ ಅನುಷ್ಠಾನ ಆಗುವುದಕ್ಕೆ ಎಲ್ಲೆಲ್ಲಿ ಲೋಪಗಳಿದ್ದಾವೆ ಎಂಬುದನ್ನು ಪತ್ತೆ ಮಾಡಿ ಸಾಕಷ್ಟು ಶ್ರಮವಹಿಸಿ ಈ ವರದಿಯನ್ನು ತಯಾರಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್ಪಿ ಅನುದಾನವನ್ನು ಕಡ್ಡಾಯವಾಗಿ ಈ ಸಮುದಾಯವರಿಗೆ ಬಳಸಬೇಕು. ಹೊರಗುತ್ತಿಗೆಯಲ್ಲಿ ಮೀಸಲಾತಿಯನ್ನು ಕಡ್ಡಾಯ ಪಾಲಿಸಬೇಕು., ಎಲ್ಲಾ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಎಸ್ಸಿ ಮತ್ತು ಎಸ್ಟಿ ಸಮುದಾಯವರಿಗೆ 100 ದಿನಗಳ ಉದ್ಯೋಗ ಖಾತ್ರಿ ನೀಡಬೇಕು. ಸ್ಮಶಾನಭೂಮಿ ಇಲ್ಲದಿರುವ ಕಡೆಗಳಲ್ಲಿ ಕೂಡಲೇ ಒದಗಿಸಬೇಕು. ಭೂ ಒಡೆತನ ಯೋಜನೆಯಡಿ ಜಮೀನು ನೀಡಬೇಕು. ನಿವೇಶನ ವಸತಿ ರಹಿತರಿಗೆ ಕೂಡಲೇ ಸೌಕರ್ಯ ಒದಗಿಸಬೇಕು. ಪ್ರಾಧಿಕಾರಗಳಿಂದ ಬರುವ ಆದಾಯದಲ್ಲಿ ಎಸ್ಸಿ ಎಸ್ಟಿ ಹಾಸ್ಟೇಲಗಳಿಗೆ ಬೆಡ್, ಕಾಟ, ದಿಂಬು ಒದಗಿಸಬೇಕು., ಹೌಸಿಂಗ್ ಸೊಸೈಟಿಗಳ ಬಡಾವಣೆಗಳಲ್ಲಿ ಸೈಟಗಳ ಮೀಸಲಾತಿ ನೀಡಬೇಕು ಎಂಬುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಮಿತಿಯು ಪರೀಶೀಲಿಸಿ ವರದಿ ನೀಡಿದೆ ಎಂದು ಅವರು ತಿಳಿಸಿದರು.
ಸಮಿತಿಯ ಅಧ್ಯಕ್ಷರಾದ ತಾವು ಮತ್ತು ಸಮಿತಿಯ ಎಲ್ಲ ಸದಸ್ಯರು ಸೇರಿ ಹಲವಾರು ತನಿಖೆಗಳನ್ನು ನಡೆಸಿ, ಹಲವಾರು ಜಿಲ್ಲೆಗಳ ಪ್ರವಾಸ ನಡೆಸಿ ಹಲವಾರು ಇಲಾಖೆಗಳನ್ನು ವಿಮರ್ಶೆ ಮಾಡಿ ಅಲ್ಲಿರುವ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಗಿರುವ ಲೋಪ ಮತ್ತು ಎಸ್ಸಿ ಎಸ್ಟಿ ಕಾಯ್ದೆಯನ್ನು ಸದ್ಬಳಕೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಆಗಿರುವ ಲೋಪಗಳನ್ನು ಹಾಗೂ ವಿಶೇಷವಾಗಿ ಹಾಸ್ಟೇಲ್ ಮತ್ತು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ದೊರಕಬೇಕಾದ ಸೌಲಭ್ಯಗಳಲ್ಲಿ ಆಗಿರುವಂತಹ ಕೊರತೆ ಬಗ್ಗೆ ಸಮಿತಿಯು ವಿಶೇಷವಾಗಿ ಈ ವರದಿಯನ್ನು ತಯಾರಿ ಮಾಡಿ ಹಲವಾರು ಮಾರ್ಾಟುಗಳನ್ನು ಸೂಚಿಸಿದೆ.
ಎಸ್ಸಿಪಿ ಟಿಎಸ್ಪಿ ಕಾಯ್ದೆಯಡಿ ಬರುವ ರೀತಿಯಲ್ಲಿ ಹೊರಗುತ್ತಿಗೆ ಮೀಸಲಾತಿ ಇರಬೇಕು, ಹೊರಗುತ್ತಿಗೆ ಸಿಬ್ಬಂದಿಗೆ ನೀಡುವ ವೇತನದ ಬಗ್ಗೆ ಜೊತೆಗೆ ಹಾಸ್ಟೇಲ್ ಮತ್ತು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಸಮಿತಿಯು ತೀಕ್ಷ-್ಣವಾಗಿ ಪರೀಶೀಲನೆ ನಡೆಸಿ ಮಾರ್ಗೋಪಾಯ ಕಂಡು ಹಿಡಿದು ವರದಿಯಲ್ಲಿ ನೀಡಿದೆ ಎಂದು ಅವರು ತಿಳಿಸಿದರು.
ವಿಶೇಷವಾಗಿ ಉತ್ತರ ಕರ್ನಾಟಕ ಏಳೆಂಟು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದಾಗ ಶೋಚನೀಯ ಅಂಶವೊಂದು ಸಮಿತಿಯ ಗಮನಕ್ಕೆ ಬಂದಿತು. ಮಾಜಿ ದೇವದಾಸಿಯರಿಗೆ ಪೂರ್ಣ ಪ್ರಮಾಣದಲ್ಲಿ ಪುನರ್ವಸತಿಯನ್ನು ಕಲ್ಪಿಸದೇ ಇರುವುದನ್ನು ಗಮನಿಸಿ ಈ ಬಗ್ಗೆ ತೀಕ್ಷ-್ಣವಾಗಿ ಪ್ರತಿಕ್ರಿಯೆ ನೀಡಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸೂಕ್ತವಾದ ಮಾರ್ಗದರ್ಶನವನ್ನು ಮಾಡಿದ್ದೇವೆ. ಸಾವಿರಾರು ಜನ ಮಾಜಿ ದೇವದಾಸಿಯರು ವಸತಿ ಇಲ್ಲದೇ ನಿವೇಶನ ಇಲ್ಲದೇ ಹಳೆಯ ಪದ್ಧತಿಯಂತೆಯೇ ಬದುಕುತ್ತಿರುವುದರ ಬಗ್ಗೆ ನಾವು ವರದಿಯಲ್ಲಿ ಬೆಳಕು ಚೆಲ್ಲಿದ್ದೇವೆ. ಈ ಬಗ್ಗೆ ಸ್ಪಷ್ಟವಾದ ವಿಚಾರಗಳನ್ನು ಮತ್ತು ದತ್ತಾಂಶಗಳನ್ನು ಕ್ರೋಢೀಕರಿಸಿ ವರದಿಯಲ್ಲಿ ನೀಡಿದ್ದೇವೆ ಎಂದರು.
ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವುದಕ್ಕೆ ಸಮಿತಿಯು ಸಲಹೆ ಮಾಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆಗೂ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆಗೂ ಅಂತರ ಇರಬಾರದು. ಈ ನಿಟ್ಟಿನಲ್ಲಿ ಇನ್ಮುಂದೆ ಕಂಪ್ಯೂಟರ್ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಎಸ್‌ಡಿಎಂಸಿಗಳ ಭಾಗವಹಿಸುವಿಕೆಯ ಜೊತೆಗೆ ಸ್ಥಳೀಯ ಅನುದಾನವನ್ನು ಕ್ರೋಢೀಕರಿಸಿ ಟ್ಯಾಬ್ ಗಳನ್ನು ನೀಡುವುದು ಮತ್ತು ಸಿಎಸ್‌ಆರ್ ಅನುದಾನ ಲಭ್ಯತೆವಿರುವ ಕಡೆಗಳಲ್ಲಿ ಅದನ್ನು ಬಳಸಿಕೊಂಡು ಗ್ರಾಮೀಣ ಶಿಕ್ಷಣವನ್ನು ಮೇಲೆತ್ತಬೇಕು ಎಂದು ಸಮಿತಿಯು ಸಲಹೆ ಮಾಡಿದೆ ಎಂದರು.
ಸಮಿತಿಯ ಸದಸ್ಯರು ಜಿಲ್ಲೆಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಮಾಹಿತಿ ಪಡೆದಾಗ ಅಲ್ಲಿ ವಿದ್ಯಾಭ್ಯಾಸ ಮಾಡುವ ಒಟ್ಟು ಮಕ್ಕಳ ಪೈಕಿ ಶೇ.50ಕ್ಕಿಂತ ಹೆಚ್ಚು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆಂಬ ಅಂಶ ತಿಳಿದು ಬಂದಿರುವುದರಿಂದ ಸೌಲಭ್ಯ ಕಲ್ಪಿಸುವುದರ ಬಗ್ಗೆ ಸಮಿತಿಯು ಕೆಲವು ಮಾರ್ಾಟುಗಳಿಗೆ ವರದಿಯಲ್ಲಿ ಅವಕಾಶ ಮಾಡಿದೆ ಎಂದು ತಿಳಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ಪಡೆದುಕೊಳ್ಳುವ ವ್ಯವಸ್ಥೆಯ ಬಗ್ಗೆ ಸಮಿತಿಯು ಪರೀಶೀಲಿಸಿದೆ. ಸಿಬ್ಬಂದಿಗೆ ಸಿಗಬೇಕಾದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಏಜೆನ್ಸಿಯವರು ಉಳಿಸಿಕೊಳ್ಳುವುದು ತಪ್ಪಬೇಕು. ಹೊರಗುತ್ತಿಗೆ ನೌಕರರಿಗೆ ಏಜೆನ್ಸಿ ಮೂಲಕ ಹಣ ನೀಡುವ ಬದಲು ನೇರವಾಗಿ ಇಲಾಖೆಗಳೇ ಸಿಬ್ಬಂದಿಯನ್ನು ನೇಮಿಸಿಕೊಂಡು ವೇತನ ಪಾವತಿಸುವುದರಿಂದ ನೌಕರರಿಗೆ ಹೆಚ್ಚುವರಿ ಹಣ ಸಿಗುತ್ತದೆ ಎಂಬುದಾಗಿ ಸಮಿತಿಯು ವರದಿಯಲ್ಲಿ ತಿಳಿಸಿದೆ ಎಂದರು.
ನಾನು ಅಧ್ಯಕ್ಷರಾದಂತಹ ಪ್ರತಿಯೊಂದು ಸಂದರ್ಭದಲ್ಲಿ ನೀಡಿದ ವರದಿಗಳು ಪರಿಣಾಮಕಾರಿಯಾಗಿ ಜಾರಿಯಾಗಿವೆ. ಬಜೆಟ್‌ನಲ್ಲಿ ಮತ್ತು ಕಾರ್ಯಕ್ರಮ ಅನುಷ್ಠಾನದಲ್ಲಿ ಸರ್ಕಾರವು ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. 2013ರ ಎಸ್ಸಿಪಿ ಟಿಎಸ್ಪಿ ಕಾಯ್ದೆಯಡಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತಹ ಶಿಫಾರಸ್ಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಥಾವತ್ತಾಗಿ ಜಾರಿಗೊಳಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರು ಮತ್ತು ಶಾಸಕರಾದ ದುರ್ಯೋದನ ಎಂ ಐಹೊಳೆ, ಕೃಷ್ಣ ನಾಯ್ಕ ಸೇರಿದಂತೆ ಇನ್ನೀತರ ಸದಸ್ಯರು ಇದ್ದರು.