ಅಮೆರಿಕಕ್ಕೆ ಅತ್ಯುತ್ತಮ ಗುಣಮಟ್ಟದ ಔಷಧಗಳ ಪೂರೈಕೆ ಮಾಡಿದ ರಷ್ಯಾ

ವಾಷಿಂಗ್ಟನ್, ಏ 3, ಅಮೆರಿಕದಲ್ಲಿ ಆತಂಕಕಾರಿಯಾಗಿ ವ್ಯಾಪಿಸುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ರಷ್ಯಾ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ಪೂರೈಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ತಿಳಿಸಿದ್ದಾರೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನೆರವನ್ನು ಪ್ರಸ್ತಾಪಿಸಲೇಬೇಕು. ಅಲ್ಲಿಂದ ಔಷಧಗಳನ್ನು ಹೊತ್ತ ಬೃಹತ್ ವಿಮಾನವೊಂದು ಆಗಮಿಸಿದೆ. ಅದನ್ನು ನಾವು ಸ್ವೀಕರಿಸಿದ್ದೇವೆ. ಅದು ಸಾಕಷ್ಟು ಜೀವಗಳನ್ನು ಉಳಿಸಬಹುದು ಎಂದಿದ್ದಾರೆ.
ರಷ್ಯಾದ ಸೇನಾ ವಿಮಾನ ಎಎನ್ -124 ಗುರುವಾರ ನ್ಯೂಯಾರ್ಕ್ ತಲುಪಿದೆ. ಇದರಲ್ಲಿ ಕೆಲವು ವಸ್ತುಗಳನ್ನು ಅಮೆರಿಕ ರಷ್ಯಾದಿಂದ ಖರೀದಿಸಿತ್ತು. ಅವುಗಳನ್ನು ತಲುಪಿಸುವಾಗ ರಷ್ಯಾ ಹೆಚ್ಚುವರಿ ಔಷಧಗಳನ್ನು ಕೂಡ ಪೂರೈಸಿದೆ. ಈ ಕುರಿತು ರಷ್ಯಾದೊಂದಿಗೆ ದೂರವಾಣಿ ಮಾತುಕತೆ ನಡೆದಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಇದರ ಹಿಂದಿರುವ ರಷ್ಯಾದ ಉದ್ದೇಶದ ಕುರಿತು ತಾವು ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.  ಗುರುವಾರ ಸಂಜೆಯವರೆಗೆ ಅಮೆರಿಕದಲ್ಲಿ 2.42 ಲಕ್ಷ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 5,800 ಜನರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 9 ಸಾವಿರ ಮಂದಿ ಗುಣಮುಖರಾಗಿದ್ದಾರೆ.