ಉತ್ತರ ಮೊಜಾಂಬಿಕ್ ನಲ್ಲಿ ರೂಬಿ ಗಣಿ ಕುಸಿತ : 11 ಸಾವು

ಮಪುಟೋ, ಫೆ 7 ,ಉತ್ತರ ಮೊಜಾಂಬಿಕ್ ನ ಕಾಬೋ ಡೆಲ್ಗೋ ಪ್ರಾಂತ್ಯದಲ್ಲಿನ ಮಾಣಿಕ್ಯ ಗಣಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ಅಕ್ರಮ ಗಣಿಗಾರರು ಮೃತಪಟ್ಟಿದ್ದಾರೆ. ಮೂರು ಬೇರೆ ಬೇರೆ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಖನಿಜ ಸಂಪನ್ಮೂಲ ಸಚಿವಾಲಯದ ಪ್ರಧಾನ ಪರೀಕ್ಷಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.  ಅಕ್ರಮ ಗಣಿಗಾರರು ಖನಿಜಗಳನ್ನು ಹೊರತೆಗೆಯುತ್ತಿದ್ದಾಗ ಭೂಕುಸಿತ ಉಂಟಾಗಿ ಫೆಬ್ರವರಿ ನಾಲ್ಕರಂದು ಮೊದಲನೇ ಸಾವು ಸಂಭವಿಸಿದೆ.   ಫೆಬ್ರವರಿ ಐದರಂದು ಇನ್ನಿಬ್ಬರು ಅದೇ ಪ್ರದೇಶದಲ್ಲಿ ಅಂತಹುದೇ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಇನ್ನೂ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪೈಕಿ ಅನೇಕರು ನಾಂಪುಲಾ ಪ್ರಾಂತ್ಯಕ್ಕೆ ಸೇರಿದವರಾಗಿದ್ದು, ಓರ್ವ ಗ್ಯುನಿಯಾ – ಬಿಸೌವೆಗೆ ಸೇರಿರುವುದಾಗಿ ಅವರು ತಿಳಿಸಿದ್ದಾರೆ. ಅಮೂಲ್ಯ ರತ್ನವನ್ನು ಕಳ್ಳಸಾಗಣೆ ಮಾಡುವ ಕಾರ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಕ್ರಮ ಗಣಿಗಾರರು ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಅಮೂಲ್ಯ ರತ್ನಗಳನ್ನೂ, ಖನಿಜಗಳನ್ನೂ ಸಾಗಿಸಲು ಹೊಂಚು ಹಾಕುತ್ತಾರೆ. ಜೊತೆಗೆ ಇಂತಹವರಿಗೆ ಹಣಕಾಸು ಪೂರೈಕೆಯ ಜಾಲವೂ ಇದ್ದು ಇವರು ಬಡ ಜನರನ್ನು ಇಂತಹ ಕೆಲಸಕ್ಕೆ ನೇಮಿಸಿ ಅವರಿಗೆ ಉದ್ಯೋಗ, ಹಣ ನೀಡುವರು ಎಂದೂ ಸಹ ಅವರು ವಿವರಿಸಿದ್ದಾರೆ.