ಕರ್ನಾಟಕ ರಾಜ್ಯೋತ್ಸವದ ಆಚರಣೆಗೆ 50 ಲಕ್ಷ ರೂ. ಬಿಡುಗಡೆ

ಕರ್ನಾಟಕ ರಾಜ್ಯೋತ್ಸವದ ಆಚರಣೆಗೆ  50 ಲಕ್ಷ ರೂ. ಬಿಡುಗಡೆ Rs 50 lakh released for Karnataka Rajyotsava celebrations

ಬೆಳಗಾವಿ 31: ಬೆಳಗಾವಿಯ ಕರ್ನಾಟಕ ರಾಜ್ಯೋತ್ಸವದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಸರಕಾರ ರಾಜ್ಯೋತ್ಸವ ಆಚರಣೆಗಾಗಿ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ.  

ಕಾನೂನು, ಪ್ರವಾಸೋದ್ಯಮ ಹಾಗೂ ಗಡಿ ಉಸ್ತುವಾರಿ ಸಚಿವರಾದ ಎಚ್‌.ಕೆ.ಪಾಟೀಲ ಅವರ ವಿಶೇಷ ಪ್ರಯತ್ನದ ಫಲವಾಗಿ ಪ್ರವಾಸೋದ್ಯಮ ಇಲಾಖೆಯಿಂದ, ವಿಶೇಷ ಪ್ರಕರಣವೆಂದು ಪರಿಗಣಿಸಿ, ಈ ಅನುದಾನವನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.  

ಇದೇ ಅಕ್ಟೋಬರ್ 8 ರಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಇತರ ವಿವಿಧ ಕನ್ನಡ ಸಂಘಟನೆಗಳ 25 ಕ್ಕೂ ಹೆಚ್ಚು ಪ್ರಮುಖರು ಬೆಂಗಳೂರಿನ ವಿಧಾನ ಸೌಧದಲ್ಲಿ ಗಡಿ ಉಸ್ತುವಾರಿ ಸಚಿವರೊಂದಿಗೆ ಗಡಿ ಭಾಗದ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಪ್ರವಾಸೋದ್ಯಮ ಇಲಾಖೆಯಿಂದಲೇ ಇಂದು ಅನುದಾನ ಬಿಡುಗಡೆ ಮಾಡಿದ್ದಾರೆ.  

ಕರ್ನಾಟಕ ರಾಜ್ಯ ರಚನೆಯಾಗಿ 70 ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರಕಾರ ಅನುದಾನ ನೀಡಿರಲಿಲ್ಲ. ಅಚ್ಚರಿಯೆಂದರೆ ಕೇವಲ 1 ಲಕ್ಷ ರೂ.ಗಳನ್ನು ಮಾತ್ರ ರಾಜ್ಯ ಸರಕಾರ ಮಂಜೂರು ಮಾಡುತ್ತಿತ್ತು. ಇಡೀ ಕರ್ನಾಟಕದಲ್ಲಿಯೇ ಅದ್ಧೂರಿ ಹಾಗೂ ವೈಭವದ ರಾಜ್ಯೋತ್ಸವ ಮೆರವಣಿಗೆ ಬೆಳಗಾವಿಯಲ್ಲಿ ನಡೆಯುತ್ತಿದ್ದು 6 ರಿಂದ 7 ಲಕ್ಷ ಜನ ಕನ್ನಡಾಭಿಮಾನಿಗಳು ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 2 ಕೋ.ರೂಗಳನ್ನು ಅನುದಾನವಾಗಿ ನೀಡಬೇಕೆಂದು ಅಕ್ಟೋಬರ್ 8 ರ ಸಭೆಯಲ್ಲಿ ಸಚಿವರನ್ನು ಆಗ್ರಹಿಸಲಾಗಿತ್ತು.ಸಚಿವರಿಗೆ ಅಭಿನಂದನೆಬೆಳಗಾವಿ ಕನ್ನಡ ಸಂಘಟನೆಗಳ ಮನವಿಗೆ ಸ್ಪಂದಿಸಿ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ ಗಡಿ ಉಸ್ತುವಾರಿ ಸಚಿವ ಶ್ರೀ ಎಚ್‌.ಕೆ.ಪಾಟೀಲ ಅವರನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಅಭಿನಂದಿಸಿದ್ದಾರೆ.  

ಅಕ್ಟೋಬರ್ 8 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಗಡಿ ಉಸ್ತುವಾರಿ ಸಚಿವ ಎಚ.ಕೆ.ಪಾಟೀಲ ಅವರೊಂದಿಗೆ ಬೆಳಗಾವಿ ಕನ್ನಡ ಸಂಘಟನೆಗಳ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರು ಉಪಸ್ಥಿತರಿದ್ದರು.