ರೈಸ್ ಟೆಕ್ನಾಲಜಿ ಪಾರ್ಕ್ ಗೆ 120 ಕೋಟಿ ರೂಪಾಯಿ ಮಂಜೂರು: ಬಿ.ಸಿ ಪಾಟೀಲ್

ಕೊಪ್ಪಳ, ಮೇ.19,  ಭತ್ತದ ಕಣಜ ಎಂದೇ ಹೆಸರಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿ ಮತ್ತಕನಕಗಿರಿ ಮಧ್ಯದಲ್ಲಿನ ನವಲಿ ಬಳಿ ನಿರ್ಮಾಣಗೊಳ್ಳುತ್ತಿರುವ " ರೈಸ್ ಟೆಕ್ನಾಲಜಿ ಪಾರ್ಕ್"120ಕೋಟಿ  ರೂ.ಮಂಜೂರಾಗಿದೆ ಎಂದು  ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾಗಿರುವ ಬಿ.ಸಿ.ಪಾಟೀಲ್  ಹೇಳಿದ್ದಾರೆ.  
ರೈಸ್ ಟೆಕ್ನಾಲಜಿ ಪಾರ್ಕ್" ಇಂದು ಭೇಟಿ ನೀಡಿ ಪರಿಶೀಲಿಸಿ, ಬಳಿಕ  ಮಾತನಾಡಿದ ಸಚಿವರು, ಈಗಾಗಲೇ ಟೆಕ್ ಪಾರ್ಕಿಗೆ  120ಕೋಟಿ  ರೂ.ಮಂಜೂರಾಗಿದ್ದು, ರಾಜ್ಯದ ಪಾಲು ಶೇ.60, ಕೇಂದ್ರದ ಶೇ.40 ಪಾಲಿನ ಅನುದಾನದಲ್ಲಿ ಒಟ್ಟು 315 ಎಕರೆ ಜಮೀನಿನಲ್ಲಿ ರೈಸ್ ಟೆಕ್ ಪಾರ್ಕ್ ನಿರ್ಮಾಣವಾಗುತ್ತಿದೆ ಎಂದರು.
ರೈಸ್ ಟೆಕ್ನಾಲಜಿ ಪಾರ್ಕಿನಿಂದ ಭತ್ತ ಹೊರ ರಾಜ್ಯಗಳಿಗೆ ರವಾನೆಯಾಗುವುದು ತಪ್ಪಲಿದೆ. ಭತ್ತ ಆಧಾರಿತ ಕಾರ್ಖಾನೆಗಳು, ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿ ಭತ್ತಕ್ಕೆ ಉದ್ಯಮದ ಸ್ವರೂಪ ಸಿಗಲಿದೆ ಎಂದರು.
ಜೊತೆಗೆ ಭತ್ತಕ್ಕೆ ಸ್ಪರ್ಧಾತ್ಮಕ ಬೆಲೆ ಸಿಗಲಿದೆ. ಅತ್ಯುತ್ತಮ ತಳಿಗಳನ್ನು ಬೆಳೆಯುವುದರಿಂದ ಇಲ್ಲಿನ ಜಾಗತಿಕ ಮನ್ನಣೆ ದೊರಕುತ್ತದೆ.ತುಂಗಭದ್ರ ಹಾಗೂ ಕೃಷ್ಣಾ ಮೇಲ್ದಂಡೆಯೋಜನೆ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ,ವಿಜಾಪುರ ಜಿಲ್ಲೆಗಳ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 45 ಲಕ್ಷ ಮೆಟ್ರಿಕ್ ಟನ್ನಷ್ಟು ಭತ್ತ ಉತ್ಪಾದನೆಯಾಗುತ್ತದೆ.ರೈಸ್ ಟೆಕ್ ಪಾರ್ಕಿನಿಂದ ಭತ್ತ ಹೊರರಾಜ್ಯಗಳಿಗೆ ಸಂಸ್ಕರಣೆಗೆ ಹೋಗುವುದು ತಪ್ಪಲಿದೆ ಹಾಗೂಭತ್ತದ ಉಪ ಉತ್ಪನ್ನಗಳ ತಯಾರಿಕೆ ರಾಜ್ಯದಲ್ಲಿಯೇ ಆಗಲಿದೆ. ಸ್ಥಳೀಯರಿಗೆ ಇದರಿಂದ ಉದ್ಯೋಗಾವಕಾಶ ಸಿಗಲಿದೆ ಎಂದು ಸಚಿವರು ಹೇಳಿದರು.
ರೈಸ್ ಪಾರ್ಕ್ನಲ್ಲಿ ಅಕ್ಕಿ ಮತ್ತು ಅಕ್ಕಿಯ ಉಪ ಉತ್ಪನ್ನಗಳಾದ ಅಕ್ಕಿ ಹಿಟ್ಟು, ಅಕ್ಕಿ ರವೆ, ಅಕ್ಕಿತೌಡು, ಎಣ್ಣೆ, ನೂಡಲ್ಸ್, ಅಕ್ಕಿ ಆಧಾರಿತ ಪಾನೀಯಗಳು, ಪಶು ಮತ್ತು ಕುಕ್ಕುಟ ಆಹಾರ ವಿಭಾಗ ಹಾಗೂ ಭತ್ತದ ತೌಡಿನಿಂದ ವಿದ್ಯುತ್ ಉತ್ಪಾದನೆ, ಇಟ್ಟಿಗೆ ತಯಾರಿಕಾ ಕಾರ್ಖಾನೆಗಳು ಇರಲಿವೆ ಎಂದರು.  
ಪಾರ್ಕ್ನಲ್ಲಿ ಚಿಲ್ಲರೆ ವರ್ತಕರು, ದಾಸ್ತಾನುಗಾರರು, ಸಾಗಾಣಿಕೆ ಕಂಪನಿಗಳು, ಪ್ಯಾಕಿಂಗ್ ಸಂಸ್ಥೆಗಳು ತಲೆ ಎತ್ತಲಿದ್ದು ಈ ಭಾಗದ ಸಾವಿರಾರು ಜನರಿಗೆ ಉದ್ಯೋಗ ದೊರಕಿಸುವ ಮೂಲಕ ಔದ್ಯೋಗಿಕ ಸಮಸ್ಯೆ ನೀಗಿಸಲು ಸಹಾಯಕವಾಗುತ್ತದೆ.
ಪಾರ್ಕ್ನಲ್ಲಿ ಉದ್ದಿಮೆದಾರರು ಘಟಕಗಳನ್ನು ಸ್ಥಾಪಿಸಲು ಅನುಕೂಲ ಕಲ್ಪಿಸಲಾಗಿದೆ. ಮುಖ್ಯವಾಗಿ ಇಲ್ಲಿ ಆಹಾರ ಸಂಸ್ಕರಣೆ ಘಟಕ ಸ್ಥಾಪಿಸುವ ಕಂಪನಿಗಳಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.ಭತ್ತದ ಎಲ್ಲ ಸಮಸ್ಯೆಗಳಿಗೆ ಏಕಗವಾಕ್ಷಿ ಪರಿಹಾರ ನೀಡಬೇಕು, ಉಪ ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಜೋಡಣೆ, ಭತ್ತದ ಹುಟ್ಟುವಳಿಯನ್ನು ಭವಿಷ್ಯತ್ತಿನ ಮಾರುಕಟ್ಟೆಗೆ ಜೋಡಿಸುವುದು ರೈಸ್ ಟೆಕ್ ಪಾರ್ಕಿನ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ ಉದ್ದೇಶ ಕೇಂದ್ರದ್ದಾಗಿದೆ.ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಾಪುರ ಜಿಲ್ಲೆಗಳಲ್ಲಿ ಬೆಳೆಯುವ ಸುಮಾರು 45 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಹೊರರಾಜ್ಯಗಳಿಗೆ ಕಳುಹಿಸುವ ಅವಶ್ಯಕತಯಿಲ್ಲ  ಇಲ್ಲಿಯೇ ಸಂಸ್ಕರಣೆ ಮಾಡಬಹುದು. ಇದರಿಂದ ಭತ್ತಕ್ಕೆ ಉದ್ಯಮ ಸ್ವರೂಪ ದೊರೆತು ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂಬ ವಿಶ್ವಾಸವ್ಯಕ್ತಪಡಿಸಿದರು.ನವಿಲೆ ಜಲಾಶಯದ ಪುನಶ್ಚೇತನ ಪ್ರಸ್ತಾವನೆ ಸಲ್ಲಿಕೆಯಾಗಿದ್ದು,ಅದಕ್ಕೆ 14 ಕೋಟಿ 40 ಲಕ್ಷ ಡಿಪಿಆರ್ ಆಗಿದ್ದು , ಜೊತೆಗೆ ಸರ್ಕಾರದ ಮಂಜೂರಾತಿ ದೊರಕಿದೆ ಈ ಹಿನ್ನಲೆಯಲ್ಲಿ ತಾವು ನವಿಲೆ ಜಲಾಶಯದ ಸ್ಥಳ  ಪರಿಶೀಲಿಸಿರುವುದಾಗಿ ಸಚಿವ ಬಿ.ಸಿ.ಪಾಟೀಲ್
ತಿಳಿಸಿದರು.