ಬೆಂಗಳೂರು,11 ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸರವಣ ಅವರನ್ನು ಗೆಲ್ಲಿಸಿಕೊಂಡು ಬರಲು ವಿಫಲರಾಗಿರುವು
ದರಿಂದ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯದ ಕನಸು ಕಂಡಿದ್ದ ಮಾಜಿ ಸಚಿವ ರೋಷನ್ ಬೇಗ್ ಆಸೆಗೆ ತಣ್ಣೀರೆರಚಿದಂತಾಗಿದೆ.ಸೋಲಿನಿಂದಾಗಿ ಕಮಲ
ಪಾಳಯದ ನೆರಳಿನಲ್ಲಿ ಭವಿಷ್ಯದ ಕಲ್ಪನೆ ಕತ್ತಲಾಗಲಿದೆ ಎಂಬ ಆತಂಕದಲ್ಲಿ ಬೇಗ್ ಇದ್ದಾರೆ.ಕೆಪಿಸಿಸಿ ಅಧ್ಯಕ್ಷ
ದಿನೇಶ್ ಗುಂಡೂರಾವ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಕೆ.ಸಿ.ವೇಣುಗೋಪಾಲ್ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ
ಗುರಿಯಾಗಿ ಪಕ್ಷದಿಂದ ಉಚ್ಚಾಟನೆಗೊಂಡ ರೋಷನ್ ಬೇಗ್, ಬಿಜೆಪಿ ನಾಯಕರು ಬಯಸದಿದ್ದರೂ ಅತೃಪ್ತ ಶಾಸಕರೊಂದಿಗೆ
ಏಕಾಏಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಎಲ್ಲರ
ಅಚ್ಚರಿಗೆ ಕಾರಣರಾಗಿದ್ದರು.
ಅದೇ ಕಾರಣಕ್ಕೆ ಅನರ್ಹ
ಶಾಸಕರ ಪಟ್ಟಿಗೆ ಸೇರಿಕೊಂಡು ಉಳಿದ ಬಂಡಾಯ ಶಾಸಕರೊಂದಿಗೆ ಸುಪ್ರೀಂ ಕೋರ್ಟ್‍ನಲ್ಲಿ ಹೋರಾಟ ಮಾಡಿ ಚುನಾವಣೆಗೆ
ಸ್ಪರ್ಧಿಸಲು ಅವಕಾಶ ಪಡೆದುಕೊಂಡರೂ, ಐಎಂಎ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವುದನ್ನೇ ಮುಂದಿಟ್ಟು
ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೇ ದೂರ ಇಟ್ಟಿತ್ತು. ಇದು ರೋಷನ್ ಬೇಗ್ ಅವರಿಗೆ ಮೊದಲ
ಆಘಾತಕ್ಕೆ ಕಾರಣವಾಯಿತು.
ಈ ಬೆಳವಣಿಗೆಯ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಲೋಚಿಸಿದರೂ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಲಹೆ ಮೇರೆಗೆ ಬಿಜೆಪಿ ಅಭ್ಯರ್ಥಿಗೆ ಬಹಿರಂಗ ಬೆಂಬಲ ನೀಡಿದ್ದರು. ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಶರವಣ ಅವರನ್ನು ಗೆಲ್ಲಿಸಿಕೊಂಡು ಬಂದರೆ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಂತ್ರಿ ಮಾಡುತ್ತಾರೆ ಎಂಬ ಭರವಸೆ ನೀಡಿದ್ದರು ಎಂದು ಹೇಳಲಾಗಿತ್ತು.ಆದರೆ, ಈಗ ಫಲಿತಾಂಶ ಹೊರ ಬಂದಿದ್ದು, ಶಿವಾಜಿನಗರ ಮತದಾರರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರನ್ನು ಗೆಲ್ಲಿಸುವ ಮೂಲಕ ಮುಸ್ಲಿಂ ಸಮುದಾಯ ಕ್ಷೇತ್ರದಲ್ಲಿ ಮತ್ತೋರ್ವ ನಾಯಕನನ್ನು ಕಂಡುಕೊಂಡಿದ್ದು, ರೋಷನ್ ಬೇಗ್ ಅವರ ರಾಜಕೀಯ ಜೀವನಕ್ಕೆ ಮುಳುವಾಗುವಂತೆ ಮಾಡಿದೆ.
ಸ್ಪಂದನೆ ಅನುಮಾನ:
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನಿಂದ ಬಿಜೆಪಿ ನಾಯಕರೂ ರೋಷನ್ ಬೇಗ್ ಅವರ ಬೇಡಿಕೆಗೆ ಸ್ಪಂದಿಸುವುದು
ಅನುಮಾನ. ಅಲ್ಲದೇ ಮುಂದಿನ ದಿನಗಳಲ್ಲಿ ಅವರ ಪುತ್ರ ರುಮಾನ್ ಬೇಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು
ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ, ಶಿವಾಜಿನಗರ ಕ್ಷೇತ್ರದಲ್ಲಿ
ಬಿಜೆಪಿಯ ಮುಸ್ಲಿಂ ಅಭ್ಯರ್ಥಿಯನ್ನು ಜನರು ಬೆಂಬಲಿಸುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸುವುದರಿಂದ
ರೋಷನ್ ಬೇಗ್, ಪಕ್ಷದ ನಾಯಕರ ವಿರುದ್ಧ ಆಕ್ರೋಶದಲ್ಲಿ ಆಡಿದ ಮಾತಿನಿಂದ ತೆಗೆದುಕೊಂಡ ನಿರ್ಧಾರ ಅವರ
ರಾಜಕೀಯ ಜೀವನವನ್ನೇ ಅಂತ್ಯಗೊಳಿಸುವ ಹಂತಕ್ಕೆ ತಂದು ನಿಲ್ಲಿಸಿದೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ
ಕೇಳಿ ಬರುತ್ತಿವೆ.
ಕೈ ನಲ್ಲಿ ಬದಲಾವಣೆಯ
ನಿರೀಕ್ಷೆ:
ರೋಷನ್ ಬೇಗ್ ಅವರು
ಬಿಜೆಪಿಯಿಂದ ಸೂಕ್ತ ಸ್ಪಂದನೆ ದೊರೆಯದೆ ಹೋದರೆ, ಮತ್ತೆ
ಕಾಂಗ್ರೆಸ್ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಉಪ ಚುನಾವಣೆಯ
ಸೋಲಿನಿಂದ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು, ಸಿದ್ದರಾಮಯ್ಯ
ಕೂಡ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವುದರಿಂದ, ಪಕ್ಷದಲ್ಲಿ ಮೂಲ ಕಾಂಗ್ರೆಸ್
ನಾಯಕರಿಗೆ ಜವಾಬ್ದಾರಿ ದೊರೆತರೆ, ಮತ್ತೆ ಕಾಂಗ್ರೆಸ್ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು
ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ.