ಮಾಂಟ್ರಿಯಲ್ / ಟೊರೊಂಟೊ, ಆ 12 ಟೆನಿಸ್ ಸ್ಟಾರ್ ರಫೆಲ್ ನಡಾಲ್ ಹಾಗೂ ಬಿಯಾಂಕಾ ಆಂಡ್ರೀಸ್ಕು ಅವರು ರೋಜರ್ಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್ ಆಗಿದ್ದಾರೆ. ಭಾನುವಾರ 70 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಸ್ಪೇನ್ ತಾರೆ ರಫೆಲ್ ನಡಾಲ್ ಅವರು ರಷ್ಯಾದ ಡೆನಿಲ್ ಮೆಡ್ವೆಡೆವ್ ಅವರ ವಿರುದ್ಧ 6-3, 6-0 ಅಂತರದಲ್ಲಿ ನೇರ ಸೆಟ್ಗಳಿಂದ ಗೆದ್ದು ಪ್ರಶಸ್ತಿ ಮುಡುಗೇರಿಸಿಕೊಂಡರು. ಈ ಗೆಲುವಿನೊಂದಿಗೆ ವಿಶ್ವದ ಎರಡನೇ ಶ್ರೇಯಾಕಿತ ಆಟಗಾರನಿಗೆ ಐದನೇ ರೋಜರ್ಸ್ ಕಪ್ ಪ್ರಶಸ್ತಿ ಇದಾಯಿತು. ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಡೆನಿಲ್ ಮೆಡ್ವೆಡೆವ್ ಅವರು "ನಾನು ಕಲಿಯುವುದು ಇನ್ನಷ್ಟು ಇದೆ. ಪ್ರಮುಖ ಪಂದ್ಯಗಳನ್ನು ಸಮೀಪಿಸಲು ನಾನು ಹೊಸ ಜ್ಞಾನದೊಂದಿಗೆ ಮುಂದಿನ ವರ್ಷ ಹಿಂತಿರುಗುತ್ತೇನೆ" ಎಂದು ಹೇಳಿದರು. ಇನ್ನು ಮಹಿಳೆಯರ ಸಿಂಗಲ್ಸ್ನಲ್ಲಿ ಬಿಯಾಂಕಾ ಆಂಡ್ರಿಸ್ಕು ಹಾಗೂ ಅಮರಿಕದ ಸೆರೇನಾ ವಿಲಿಯಮ್ಸ್ ಅವರ ನಡುವೆ ನಡೆಯುತ್ತಿದ್ದ ಫೈನಲ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಮೂರು ಬಾರಿ ಕೆನಡಿಯನ್ ಚಾಂಪಿಯನ್ ಪಂದ್ಯದಿಂದ ಹೊರ ನಡೆದರು. ಇದರ ಫಲವಾಗಿ ಬಿಯಾಂಕಾ ಆ್ಯಂಡ್ರಿಸ್ಕು ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಆ್ಯಂಡ್ರಿಸ್ಕು ಅವರು ಮೊದಲನೇ ಸೆಟ್ನಲ್ಲಿ 3-1 ಮುನ್ನಡೆ ಸಾಧಿಸಿದ್ದರು. ಈ ವೇಳೆ ವಿಲಿಯಮ್ಸ್ ಅವರ ಬೆನ್ನು ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಅವರು ಪಂದ್ಯವನ್ನು ಮುಂದುವರಿಸಲಾಗದೆ ಅಂಗಳ ತೊರೆದರು. ಪಂದ್ಯದ ಬಳಿಕ ಮಾತನಾಡಿ ಚಾಂಪಿಯನ್ ಬಿಯಾಂಕಾ," ನೀವು (ಸೆರೇನಾ ವಿಲಿಯಮ್ಸ್) ಅಂಗಳದಿಂದ ಹೊರ ಹೋಗುತ್ತೀರಿ ಎಂದು ಭಾವಿಸಿರಲಿಲ್ಲ. ಅಲ್ಲದೆ, ಇದು ನಾನು ನೀರೀಕ್ಷೆ ಮಾಡಿದ್ದ ಗೆಲುವಲ್ಲ. ಆದರೆ ನೀವು (ಸೆರೆನಾ) ಅಂಗಳದ ಹೊರಗೆ ನಿಜವಾಗಿಯೂ ಚಾಂಪಿಯನ್ ಎಂದು ಹೇಳಿದರು.