ಡಿಸೆಂಬರ್ 16 ರಂದು ರಸ್ತೆ ತಡೆ: ಬೃಹತ್ ಪ್ರತಿಭಟನೆ
Roadblock on December 16: Massive protest
ಕಾರವಾರ 11: ನಗರದ ಹಬ್ಬುವಾಡ ಸೇರಿದಂತೆ ಕಾರವಾರ- ಕೈಗಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಕಾಮಗಾರಿ ಆರಂಭಿಸದ ಲೋಕೋಪಯೋಗಿ ಇಲಾಖೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರಗಳ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ, ಡಿಸೆಂಬರ್ 16 ರಂದು ರಸ್ತೆ ತಡೆ ನಡೆಸಿ, ಸಾರ್ವಜನಿಕರಿಂದ ಸಂಗ್ರಹಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ದುರಸ್ತಿಗೆ ಒತ್ತಾಯಿಸಿ ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಸರ್ಕಾರದಿಂದ ರಸ್ತೆ ಕಾಮಗಾರಿಗೆ 20 ಕೋಟಿ ರೂ. ಮಂಜೂರಾಗಿದ್ದು, ಡಿಸೆಂಬರ್ 1 ರಂದೇ ಕಾಮಗಾರಿ ಶುರು ಮಾಡುವುದಾಗಿ ಪಿಡಬ್ಲ್ಯೂಡಿ ಅಧಿಕಾರಿಗಳು ಹೇಳಿದ್ದರು. ಆದರೆ, ಗಡುವು ಮುಗಿದು ಹಲವು ದಿನ ಕಳೆದರೂ ಕಾಮಗಾರಿ ಆರಂಭಿಸುವ ಲಕ್ಷಣಗಳು ಕಾಣುತ್ತಿಲ್ಲ. ಅಧಿಕಾರಿಗಳು ಕೇವಲ ಭರವಸೆ ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉತ್ಸವಕ್ಕೆ ಹಣವಿದೆ, ರಸ್ತೆಗಿಲ್ಲ: ಜನರ ಪ್ರಾಣಕ್ಕೆ ಸಂಚಕಾರ ತರುವ ಹೊಂಡಮಯ ರಸ್ತೆಯನ್ನು ಸರಿಪಡಿಸಲು ಅನುದಾನವಿಲ್ಲ ಎಂದು ಹೇಳುವ ಜಿಲ್ಲಾಡಳಿತ, ಇನ್ನೊಂದೆಡೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ‘ಕರಾವಳಿ ಉತ್ಸವ’ನಡೆಸಲು ಮುಂದಾಗಿರುವುದು ಸರಿಯಲ್ಲ. ಕೇವಲ ಪ್ರಭಾವಿಗಳು ಹಾಗೂ ಅಧಿಕಾರಿಗಳ ಮೋಜಿಗೆ ಉತ್ಸವ ನಡೆಸಲಾಗುತ್ತಿದ್ದು, ಜನಸಾಮಾನ್ಯರ ಮೂಲಭೂತ ಅವಶ್ಯಕತೆಯಾದ ರಸ್ತೆಯನ್ನು ಕಡೆಗಣಿಸಲಾಗಿದೆ ಎಂದರು. ಸುಮಾರು 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗಾ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿ ನಡೆಯುತ್ತಿದೆ. ಈ ಯೋಜನೆಗೆ ಸಾಮಗ್ರಿಗಳನ್ನು ತರುವ ಭಾರಿ ವಾಹನಗಳ ಓಡಾಟದಿಂದಲೇ ರಸ್ತೆ ಹಾಳಾಗಿದೆ. ಪ್ರಸ್ತುತ ರಸ್ತೆ ಹದಗೆಟ್ಟಿರುವ ಕಾರಣ ಸಾಮಗ್ರಿಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಆದರೂ, ಕೈಗಾ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ಅಧಿಕಾರಿಗಳ ಕಣ್ಣು ತೆರೆಸಲು ಆಟೋ ಚಾಲಕರು ಹಾಗೂ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಡಿ.16 ರಂದು ರಸ್ತೆ ತಡೆ ನಡೆಸಲಾಗುವುದು.
ಈ ವೇಳೆ ಎರಡು ಪ್ರತ್ಯೇಕ ಕಾಣಿಕೆ ಡಬ್ಬಿಗಳನ್ನು ಇಟ್ಟು, ಸಾರ್ವಜನಿಕರಿಂದ ‘ಭಿಕ್ಷೆ’(ದೇಣಿಗೆ) ಸಂಗ್ರಹಿಸಲಾಗುವುದು. ಸಂಗ್ರಹವಾದ ಹಣವನ್ನು ಲೋಕೋಪಯೋಗಿ ಇಲಾಖೆ ಹಾಗೂ ಕೈಗಾ ಯೋಜನೆಗೆ ಕಳುಹಿಸಿಕೊಡುವ ಮೂಲಕ ಅವರ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಮಾಕಾಂತ ಗುನಗಿ, ರೂಪೇಶ ಗುನಗಿ, ಉದಯ ನಾಯ್ಕ, ಚಂದ್ರಕಾಂತ ನಾಯ್ಕ, ಸಿ.ಎನ್.ನಾಯ್ಕ, ಕಾಶಿನಾಥ ಬಂಟ, ಅಶೋಕ ಮಾಂಜ್ರೇಕರ, ಲಾರೆನ್ಸ್, ಮಾರುತಿ, ಗುರು ನಾಯ್ಕ, ದೇವೇಂದ್ರ ಗುನಗಿ ಹಾಗೂ ಶ್ರೀಪಾದ ನಾಯ್ಕ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 