ಮುಖ್ಯಮಂತ್ರಿ ಗದ್ದುಗೆಗೆ ಅಪಾಯ .. ಎಂ ಎಲ್ ಸಿ ಪದವಿ ನೀಡಿ...!

ಮುಂಬೈ, ಏ ೯, ಮುಖ್ಯಮಂತ್ರಿ ಉದ್ಧವ್  ಠಾಕ್ರೆ ಅವರ  ಗದ್ದುಗೆಗೆ  ಗಂಡಾಂತರ ಎದುರಾಗಬಹುದೇ      ಎಂದು ಭಾವಿಸಿದರೆ,  ಪ್ರಸಕ್ತ ಸನ್ನಿವೇಶಗಳನ್ನು  ನೋಡಿದರೆ  ಬಂದರೂ  ಬರಬಹುದೇನೋ  ಎನಿಸುತ್ತದೆ..! ಮುಖ್ಯಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕರಿಸಿದ  ಆರು ತಿಂಗಳೊಳಗೆ ಶಾಸನಸಭೆಯ ಕೆಳಮನೆ, ಇಲ್ಲವೆ ಮೇಲ್ಮನೆ  ಸದಸ್ಯರಾಗಿ ಆಯ್ಕೆಯಾಗಬೇಕು.  ಆದರೆ, ಪ್ರಸ್ತುತ ಕೊರೊನಾ  ವೈರಾಣು ಸಂಕಷ್ಟದಿಂದಾಗಿ ಎಲ್ಲ ರಾಜ್ಯಗಳಲ್ಲೂ ಚುನಾವಣೆಗಳನ್ನುಮುಂದೂಡಲಾಗಿದೆ. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ಅವರನ್ನು  ವಿಧಾನ ಪರಿಷತ್  ಸದಸ್ಯರನ್ನಾಗಿ ನಾಮಕರಣಗೊಳಿಸಲು  ಆ ರಾಜ್ಯ ಸರ್ಕಾರ ಗುರುವಾರ  ತೀರ್ಮಾನ  ಮಾಡಿದೆ. ಈ ಸಂಬಂಧ  ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ  ಅವರಿಗೆ  ಪ್ರಸ್ತಾವನೆ  ರವಾನಿಸಲಾಗಿದೆ. ಉದ್ಧವ್ ಠಾಕ್ರೆ  ೨೦೧೯ ರ ನವೆಂಬರ್ ೨೮ ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.  ಮೇ ೨೮ ಕ್ಕೆ  ಆರು  ತಿಂಗಳ ಅವಧಿ  ಕೊನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ  ಗುರುವಾರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಉದ್ಧವ್ ಠಾಕ್ರೆ  ಅವರನ್ನು ಎಂಎಲ್ ಸಿ ಆಗಿ ನಾಮಕರಣ ಗೊಳಿಸಲು ತೀರ್ಮಾನ ಕೈಗೊಳ್ಳಲಾಯಿತು. ಒಂದೊಮ್ಮೆ,  ರಾಜ್ಯಪಾಲರು  ಸಂಪುಟ ತೀರ್ಮಾನವನ್ನು ಅಂಗೀಕರಿಸದಿದ್ದರೆ, ಅವರು ರಾಜೀನಾಮೆ ನೀಡುವ ಪರಿಸ್ಥಿತಿ  ನಿರ್ಮಾಣಗೊಳ್ಳಲಿದೆ. ಲಾಕ್‌ಡೌನ್ ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಒಂದು ವೇಳೆ ಲಾಕ್ ಡೌನ್ ಕೊನೆಗೊಂಡರೂ,  ಮೇ ೨೮ ರೊಳಗೆ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಸುವುದು ಅಸಾಧ್ಯ. ಏಕೆಂದರೆ ದೇಶದಲ್ಲಿ ಅತಿ ಹೆಚ್ಚು  ೧೧೩೫  ಕೊರೊನಾ  ಪ್ರಕರಣಗಳು ಮತ್ತು ೭೨ ಸಾವುಗಳು ಮಹಾರಾಷ್ಟ್ರದಲ್ಲಿ  ದಾಖಲಾಗಿವೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ರಚಿಸಿಕೊಂಡು  ರಾಜ್ಯದಲ್ಲಿ ಸರ್ಕಾರ  ನಡೆಸುತ್ತಿವೆ.