ನವದೆಹಲಿ, ಮಾ 27, ಕೊರೊನಾ ವೈರಸ್ ಭೀತಿಯಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಆಟಗಾರರೆಲ್ಲರೂ ಮನೆಯೊಳಗೆ ಉಳಿಯುವಂತಾಗಿದೆ. ಈ ನಡುವೆ ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಮನೆಯೊಳಗೆ ತಮ್ಮ ದೈಹಿಕ ಕಸರತ್ತನ್ನುಮುಂದುವರಿಸಿದ್ದಾರೆ.ಬಿಸಿಸಿಐ ಶುಕ್ರವಾರ ವಿಡಿಯೊವೊಂದನ್ನು ಶೇರ್ ಮಾಡಿದ್ದು ಅದರಲ್ಲಿ 21 ವರ್ಷದ ಪಂತ್ ಪುಶ್ ಅಪ್, ಓಟ ಮತ್ತಿತರ ವ್ಯಾಯಾಮದ ಮೂಲಕ ದೈಹಿಕ ಫಿಟ್ನೆಸ್ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದಾರೆ.ಸುದ್ದಿ ಸಂಸ್ಥೆಗಳ ಜತೆ ಮಾತನಾಡಿದ ಬಿಸಿಸಿಐ ಮೂಲಗಳು, ಟೀಮ್ ಇಂಡಿಯಾದ ಸ್ಟ್ರೆಂಥ್ ಹಾಗೂ ಕಂಡೀಷನಿಂಗ್ ಕೋಚ್ ನಿಕ್ ವೆಬ್ ಅವರು ಗುತ್ತಿಗೆ ಪಡೆದಿರುವ ಆಟಗಾರರ ದೈಹಿಕ ಕ್ಷಮತೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆಟಗಾರರಿಗೆ ಮನೆಯಲ್ಲಿಯೇ ಇದ್ದು ದೇಹ ದಂಡಿಸುವ ಕುರಿತು ಹೇಳಿಕೊಡಲಾಗುತ್ತಿದೆ,'' ಎಂದು ಹೇಳಿವೆ."ಸೀಮಿತ ಓವರ್‌ಗಳ ಅಥವಾ ಟೆಸ್ಟ್ ಆಟಗಾರರೇ ಆಗಲಿ, ಅವರಿಗೆ ದೈನಂದಿನ ವ್ಯಾಯಾಮ ಮುಂದುವರಿಸಲು ಹೇಳಲಾಗಿದೆ. ತಾವು ಮಾಡಿರುವ ದೈಹಿಕ ಕಸರತ್ತಿನ ಕುರಿತು ಕೋಚ್‌ಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ,'' ಎಂದು ಮೂಲಗಳು ಹೇಳಿವೆ.