ಬಸ್ತವಾಡದಲ್ಲಿ ಪಾರಿವಾಳ ವಿಷಯಕ್ಕೆ ಗಲಾಟೆ : ಪ್ರತ್ಯೇಕ ಕೇಸ್‌ನಲ್ಲಿ 9 ಜನರ ಬಂಧನ

Riot over pigeon issue in Bastawada: 9 people arrested in a separate case

ಬೆಳಗಾವಿ 06: ಬೆಳಗಾವಿ ತಾಲೂಕು ಬಸ್ತವಾಡ ಗ್ರಾಮದ ಜಾತ್ರೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಈ ಬಗ್ಗೆ ಹಿರೇಬಾಗೇವಾಡಿ ಹಾಗೂ ಮಾಳ ಮಾರುತಿ ಪೋಲಿಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಒಂಬತ್ತು ಜನರನ್ನು ಬಂಧಿಸಿದ್ದಾರೆ. 

ಹಿರೇಬಾಗೇವಾಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸ್ತವಾಡ ಗ್ರಾಮದಲ್ಲಿ ಜೈನ ಜಾತ್ರೆ ಸಂದರ್ಭದಲ್ಲಿ ಜಾತ್ರೆಗೆ ಬಂದ ಆದಿತ್ಯಾ ಕಲ್ಲಪ್ಪ ಪಾಟೀಲ, ದರ್ಶನ ಬಾಹುಬಲಿ ಕುಡಚಿ ಇವರಿಬ್ಬರ ಮಧ್ಯೆ ಪಾರಿವಾಳ ವಿಷಯದ ಸಲುವಾಗಿ ರೂ.1500 ಗಳನ್ನು ಕೊಡುವ ಬಗ್ಗೆ ವಾದ-ವಿವಾದ ಉಂಟಾಗಿ ಗಲಾಟೆಯಾಗಿದೆ. ಆದಿತ್ಯಾ ಕಲ್ಲಪ್ಪ ಪಾಟೀಲ ಹಾಗೂ ಆತನೊಂದಿಗೆ ಇನ್ನೂ 8 ಜನ ಸೇರಿ ದರ್ಶನ ಬಾಹುಬಲಿ ಕುಡಚಿಯನ್ನು ಹೊಡೆದಿದ್ದು, ಈ ವಿಷಯವಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದರಲ್ಲಿ 3 ಆರೋಪಿತರನ್ನು ಹಿರೇಬಾಗೇವಾಡಿ ಪೊಲೀಸರು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,  ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.  

ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ ಬಾಹುಬಲಿ ಕುಡಚಿ ಈತನ ಸಹಚರರು ಕೂಡಿಕೊಂಡು ಇದೇ ಸಿಟ್ಟಿನಿಂದ ಬಸವಣ ಕುಡಚಿಗೆ ಬಂದು ಆದಿತ್ಯಾ ಕಲ್ಲಪ್ಪ ಪಾಟೀಲನ ಮನೆಗೆ ಹೋಗಿ ಆದಿತ್ಯಾ ಎಲ್ಲಿದ್ದಾನೆ ಎಂದು ಆತನ ಸಹೋದರ ಮತ್ತು ತಂದೆಗೆ ಹೊಡೆದು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಆರು ಜನ ಆರೋಪಿತರನ್ನು ಮಾಳಮಾರುತಿ ಪೊಲೀಸರು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.  

ಘಟನೆ ವಿವರ : ಪಾರಿವಾಳದ ವಿಚಾರಕ್ಕೆ ಯುವಕರಿಬ್ಬರು ಬೆಳಗಾವಿ ತಾಲೂಕು ಬಸ್ತವಾಡದಲ್ಲಿ ಹೊಡೆದಾಡಿದ್ದಾರೆ. ದರ್ಶನ್ ಮತ್ತು ಅಪ್ರಾಪ್ತನ ನಡುವೆ ಗಲಾಟೆ ನಡೆದಿದೆ. ಅಪ್ರಾಪ್ತನಿಗೆ ಒಂದೂವರೆ ಸಾವಿರಕ್ಕೆ ಪಾರಿವಾಳ ಮಾರಾಟ ಮಾಡಿದ್ದ ದರ್ಶನ್‌. ಪಾರಿವಾಳ ಪಡೆದಿದ್ದ ಹಣ ವಾಪಸ್ ಕೊಡುವಂತೆ ದರ್ಶನ್ ಕೇಳಿದ್ದಾನೆ.  

ಪದೇ ಪದೆ ಹಣ ಕೇಳಿರುವುದಕ್ಕೆ ಸಿಟ್ಟಿಗೆದ್ದ ಆಪ್ರಾಪ್ತ ಯುವಕ ಬೆದರಿಕೆ ಹಾಕಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಪ್ರಾಪ್ತ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ದರ್ಶನ್ ಎಂಬಾತನಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.  

ಇದೇ ಸಿಟ್ಟಿಗೆ ರಾತ್ರೋರಾತ್ರಿ ಸಿನಿಮಾ ಸ್ಟೈಲ್‌ನಲ್ಲಿ 15ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ಬಸವನಕುಡಚಿ ಗ್ರಾಮಕ್ಕೆ ಬಂದಿದ್ದ ದರ್ಶನ್ ಗ್ರಾಮದಲ್ಲಿರುವ ಅಪ್ರಾಪ್ತ ಮನೆಗೆ ನುಗ್ಗಿ ಮನೆ ಧ್ವಂಸ ಮಾಡಲು ಯತ್ನಿಸಿದ್ದಾನೆ. ಅಪ್ರಾಪ್ತ ಯುವಕನ ಮನೆಯಲ್ಲಿದ್ದ ಟಿವಿ, ಕಿಟಕಿ ಗಾಜು ಧ್ವಂಸಗೊಳಿಸಿ ಪಾತ್ರೆಗಳನ್ನು ಚಿಲ್ಲಾಪಿಲ್ಲಿ ಮಾಡಿರುವ ದರ್ಶನ್ ಗ್ಯಾಂಗ್, ಬಳಿಕ ಅಪ್ರಾಪ್ತನ ತಂದೆಗೆ ಬೆದರಿಸಿ ಕೈಗೆ ಹಗ್ಗದಿಂದ ಕಟ್ಟಿ ಮನೆಯಿಂದ ಕರೆದೊಯ್ಯಲು ಯತ್ನಿಸಿದೆ. 

 ನಮ್ಮ ಜೊತೆಗೆ ಬಾರದಿದ್ದರೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಹಿರೇಬಾಗೇವಾಡಿ, ಮಾಳಮಾರುತಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಅಪ್ರಾಪ್ತ ಸೇರಿ ಮೂವರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತ ಮನೆ ಧ್ವಂಸಕ್ಕೆ ಯತ್ನಿಸಿದ 7 ಜನರನ್ನು ಬಂಧಿಸಿ ಮಾಳಮಾರುತಿ ಪೊಲೀಸರು ಜೈಲಿಗಟ್ಟಿದ್ದಾರೆ.