ಠೇವಣಿದಾರರ ವಿಶ್ವಾಸ ಉಳಿಸಿ ಸಹಕಾರಿ ಬ್ಯಾಂಕುಗಳನ್ನು ಬಲಿಷ್ಠಗೊಳಿಸಿ: ರಾಹುಲ ಜಾರಕಿಹೊಳಿ

ಠೇವಣಿದಾರರ ವಿಶ್ವಾಸ ಉಳಿಸಿ ಸಹಕಾರಿ ಬ್ಯಾಂಕುಗಳನ್ನು ಬಲಿಷ್ಠಗೊಳಿಸಿ: ರಾಹುಲ ಜಾರಕಿಹೊಳಿ  Retain depositors' trust and strengthen cooperative banks: Rahul Jarkiholi

ಬೆಳಗಾವಿ, ಜು.30: ಸಹಕಾರಿ ಕ್ಷೇತ್ರದಲ್ಲಿ ಜವಾಬ್ದಾರಿಯುತ ಕಾರ್ಯನಿರ್ವಹಣೆ ಅತ್ಯಂತ ಮುಖ್ಯವಾಗಿದ್ದು, ಠೇವಣಿದಾರರ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ ಹೇಳಿದರು.  ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಉಪವಿಭಾಗದ ಪತ್ತಿನ (ಕ್ರೆಡಿಟ್) ಸಹಕಾರಿ ಸಂಘಗಳು ಮತ್ತು ನೌಕರರ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಗ್ರಾಹಕರ ಹಣವನ್ನು ಸುರಕ್ಷಿತವಾಗಿ ಕಾಪಾಡಿ, ಅಗತ್ಯ ಸಂದರ್ಭದಲ್ಲಿ ಮರುಪಾವತಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವಂತಹ ವಿಶ್ವಾಸದ ವಾತಾವರಣ ನಿರ್ಮಿಸಬೇಕು. ಸಹಕಾರಿ ಯೂನಿಯನ್ಗಳು ಮತ್ತಷ್ಟು ಸದೃಢವಾಗಬೇಕಿದ್ದು, ಬ್ಯಾಂಕುಗಳ ಅಭಿವೃದ್ಧಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಹೇಳಿದರು.  

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.  ಬೆಳಗಾವಿ ವಿಭಾಗದ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕರಾದ ಕಲ್ಲಪ್ಪಾ ಓಬಣ್ಣಗೋಳ ಮಾತನಾಡಿ, ತರಬೇತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಭಾಗವಹಿಸಿರುವುದು ಸಂತಸದ ಸಂಗತಿಯಾಗಿದೆ. ಬ್ಯಾಂಕಿಂಗ್ ವ್ಯವಹಾರ, ರೈತರಿಗೆ ಸಾಲ ವಿತರಣೆ, ಬಡ್ಡಿದರ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿರಂತರ ತರಬೇತಿ ಅಗತ್ಯವಾಗಿದೆ ಎಂದರು.