ಅತಿ ಹೆಚ್ಚು ಕೊರೊನಾ ಪೀಡಿತ ಇಟಲಿಯಲ್ಲಿ ಮೇ 4 ರಿಂದ ನಿರ್ಬಂಧ ಸಡಿಲಿಕೆ

ರೋಮ್, ಏ 27, ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ವಿಧಿಸಲಾಗಿರುವ ಲಾಕ್ ಡೌನ್ ನಿರ್ಬಂಧವನ್ನು ಮೇ 4 ರಿಂದ ಸಡಿಲಿಸಲು ಇಟಲಿ ಯೋಜಿಸಿದೆ.ತಮ್ಮ ಪ್ರದೇಶದೊಳಗೇ ಇರುವ ಬಂಧು ಬಾಂಧವರ ಭೇಟಿಗೆ ಅವಕಾಶ ನೀಡಲಾಗಿದೆ, ಉಳಿದಂತೆ ಕೆಲಸಕ್ಕೆ ತೆರಳಲು ಮತ್ತು ಆರೋಗ್ಯ ಸಂಬಂಧಿತ ಕಾರಣಗಳಿಗಾಗಿ ಓಡಾಟಕ್ಕೆ ಅವಕಾಶ ಮುಂದುವರಿಯಲಿದೆ ಎಂದು ಪ್ರಧಾನಮಂತ್ರಿ ಗಿಯುಸೆಪ್ಪೆ ಕೊಂಟೆ ಹೇಳಿದ್ದಾರೆ.
ಮೇ 4 ರಿಂದ ಎಲ್ಲಾ ಸಾರ್ವಜನಿಕ ಉದ್ಯಾನವನಗಳು ತೆರೆಯಲಿವೆ ಮತ್ತು ಬಾಹ್ಯ ಕ್ರೀಡೆಗಳಿಗೂ ಅವಕಾಶವಿರಲಿದೆ. ಕೊರೊನಾ ಸಾಂಕ್ರಾಮಿಕದಿಂದ ರಾಷ್ಟ್ರ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಭಾಗಶಃ ಸಡಿಲಿಸಲಾಗಿದೆ ಎಂದು ಅವರು ಟಿವಿ ವಾಹಿನಿ ಮೂಲಕ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.ತಯಾರಿಕಾ ವಲಯ ಮತ್ತು ನಿರ್ಮಾಣ ವಲಯಗಳಲ್ಲೂ ಕೂಡ ಚಟುವಟಿಕೆಗಳ ಪುನರಾರಂಭಕ್ಕೆ ಅನುಮತಿ ಇದ್ದು ವ್ಯಾಪಾರ ವಹಿವಾಟು ಮೇ 18 ರ ನಂತರ ಆರಂಭಿಸಬಹುದಾಗಿದೆ.ಮೇ 4 ರಿಂದ ಮನೆ ಸಮೀಪ ದೈಹಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದರೂ ಕನಿಷ್ಠ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಜನರು ಗುಂಪು ಸೇರುವುದಕ್ಕೆ ನಿರ್ಬಂಧ ಮುಂದುವರಿಸಲಾಗಿದೆ ಎಂದು ಅವರು ಹೇಳಿದಾರೆ. ಕಳೆದ 24 ಗಂಟೆಗಳಲ್ಲಿ ಇಟಲಿಯಲ್ಲಿ ಕೊರೊನಾ ಸೋಂಕಿನಿಂದ 260 ಜನರು ಸಾವನ್ನಪ್ಪಿದ್ದು ಮೇ 15 ರ ನಂತರ ಅತಿ ಕಡಿಮೆ ಸಂಖ್ಯೆ ಇದಾಗಿದೆ ಇಟಲಿಯಲ್ಲಿ ಕೊರೊನಾ ಸೋಂಕಿನಿಂದ 26,644 ಜನರು ಮೃತಪಟ್ಟಿದ್ದು ಒಟ್ಟು ಸೋಂಕಿತ, ಮೃತ ಮತ್ತು ಗುಣಮುಖರ ಸಂಖ್ಯೆ 1,97,675 ರಷ್ಟಿದೆ.