ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ: ಶಾಸಕ ನಾಡಗೌಡ

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ: ಶಾಸಕ ನಾಡಗೌಡ  Respond to public concerns: MLA Nadagowda


ತಾಳಿಕೋಟಿ 24: ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರದ ಮಾರ್ಗದರ್ಶನದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು.ಕೆಲವು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಕಂಡು ಬಂದಿದೆ ಅಂಥವರು ಜಾಗ ಖಾಲಿ ಮಾಡಿ ಹೋಗಬಹುದು ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ ಎಸ್ ನಾಡಗೌಡ ಅಪ್ಪಾಜಿ ಖಡಕ್ ಎಚ್ಚರಿಕೆ ನೀಡಿದರು.  

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಜಿಪಂ.ವಿಜಯಪುರ,ತಾಪಂ ತಾಳಿಕೋಟಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಅಧಿಕಾರಿಗಳ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಎರಡು ದಿನಗಳಿಂದ ಪಟ್ಟಣದ ವಾರ್ಡ ಮಟ್ಟದ ಸಭೆಗಳನ್ನು ನಡೆಸಿದ್ದು ಇಲ್ಲಿರುವ ಪ್ರಮುಖ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಉತಾರಗಳ ದೊಡ್ಡ ಸಮಸ್ಯೆ ಇದ್ದು ಅದನ್ನು ಸರಿಪಡಿಸಬೇಕೆಂದು ಮುಖ್ಯಾ ಧಿಕಾರಿಗೆ ತಿಳಿಸಿದರು. ಪಟ್ಟಣದ ಸಮೀಪ ಇರುವ ಡಾಬಾಗಳಲ್ಲಿ ಹಾಗೂ ಗ್ರಾಮಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುವುದನ್ನು ತಡೆಯಬೇಕು ಇದರಿಂದ ಕುಟುಂಬಗಳು ಹಾಗೂ ಯುವಕರು ಹಾಳಾಗಿ ಹೋಗುತ್ತಿದ್ದಾರೆ ಎಂದು ತಿಳಿಸಿ ಕಟ್ಟು ನಿಟ್ಟಿನ ಕ್ರಮಕ್ಕಾಗಿ ಅಬಕಾರಿ ಇಲಾಖೆ ಸಿಬ್ಬಂದಿಗಳಿಗೆ ಆದೇಶಿಸಿದರು,

ಅಬಕಾರಿ ಅಧಿಕಾರಿಗಳು ಸಭೆಯಲ್ಲಿ ಗೈರಾಗಿರುವುದಕ್ಕೆ ಸಿಡಿಮಿಡಿಕೊಂಡ ಶಾಸಕರು ಮುಂದೆ ಹೀಗಾಗದಂತೆ ನೋಡಿಕೊಳ್ಳಲು ತಿಳಿಸಿದರು. ಸಾರ್ವಜನಿಕರು ಸೇವೆಯ ದೃಷ್ಟಿಯಿಂದ ಆರೋಗ್ಯ ಇಲಾಖೆ ಪ್ರಮುಖವಾಗಿದ್ದು ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು, ಸರಕಾರಿ ಆಸ್ಪತ್ರೆಗೆ ಬರುವರು ಅತಿಹೆಚ್ಚಿನ ರೋಗಿಗಳು ಬಡವರು ಅವರ ಕುರಿತು ನಿರ್ಲಕ್ಷೆ ಬೇಡ ಅವರಿಗೆ ಸರ್ಕಾರಿ ಆಸ್ಪತ್ರೆಯಿಂದಲೇ ಓಷಧಿಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿ ಡಯಾಲಿಸಿಸ್ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ನಮ್ಮ ಸರ್ಕಾರ ರೈತರ ಹಿತವನ್ನು ಕಾಪಾಡಲು ಬದ್ಧವಾಗಿದೆ ಅವರಿಗೆಲ್ಲ ರೀತಿಯ ಅನುಕೂಲ ಮಾಡಿಕೊಡುತ್ತಿದೆ ಬೆಳೆ ಹಾನಿಯನ್ನು ಈಗಾಗಲೇ ನೀಡಲಾಗಿದ್ದು ಬೆಳೆ ವಿಮೆಯನ್ನು ಕಂಪನಿಯವರು ನೀಡಲು ಸೂಕ್ತ ಕ್ರಮ ವಹಿಸಲಾಗುತ್ತಿದೆ ವಿರೋಧಪಕ್ಷದವರು ವಿನಾಕಾರಣ ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅದನ್ನು ಅವರು ನಿಲ್ಲಿಸಬೇಕು, ರೈತ ನಾಯಕರು ದಾರಿ ತಪ್ಪಿಸುವ ಕೆಲಸ ಮಾಡುವಾಗ ಅಧಿಕಾರಿಗಳು ಮಾಧ್ಯಮದ ಮುಖಾಂತರ ಅದಕ್ಕೆ ಸ್ಪಷ್ಟನೆ ನೀಡಬೇಕೆಂದು ತಿಳಿಸಿದರು. ತಾಳಿಕೋಟಿ ಪಟ್ಟಣದಲ್ಲಿ ಸುಸಜ್ಜಿತವಾದ ಒಂದು ಕ್ರೀಡಾಂಗಣ ಮಾಡುವ ಉದ್ದೇಶವಿದೆ ಇದಕ್ಕೆ ನಿವೇಶನದ ಅಗತ್ಯವಿದ್ದು ಅಧಿಕಾರಗಳು ಈ ನಿಟ್ಟಿನಲ್ಲಿ ಸಲಹೆ ನೀಡಬೇಕು ಎಂದರು.  

ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದ ಕುರಿತು ಬೇಸರ ವ್ಯಕ್ತಪಡಿದ ಶಾಸಕರು ಕೆಲಸ ಮಾಡಲು ಸಾಧ್ಯ ಇಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಹೋಗಿ ಎಂದರು. ಸರ್ಕಾರದ ಪಂಚ ಗ್ಯಾರಂಟಿಗಳಲ್ಲಾದ ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆ ಕುರಿತು ಎರಡು ಇಲಾಖೆಯವರಿಂದ ವರದಿ ಪಡೆದು ಸಂತೋಷವನ್ನು ವ್ಯಕ್ತಪಡಿಸಿದ ಶಾಸಕರು ಇದರಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ ಆದರೆ ಗ್ರಹಲಕ್ಷ್ಮಿ ಯೋಜನೆ ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲು ಸುಧಾರಿತ ಕ್ರಮ ಕೈಗೊಳ್ಳಬೇಕು. ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಮೂಲಸೌಲಭ್ಯಗಳನ್ನು ನೀಡುವಲ್ಲಿ ನಿಗಧಿತ ಯೋಜನೆಗಳನ್ನು ರೂಪಿಸಬೇಕು.

ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡಿ ಮತಕ್ಷೇತ್ರದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಿ ಎಂದು ತಿಳಿಸಿ ಕೆಲವು ಗ್ರಾಮಗಳಲ್ಲಿ ಸರ್ಕಾರಿ ಜಾಗಗಳನ್ನು ಅತಿಕ್ರಮಣ ಮಾಡಲಾಗಿದೆ ಇದರ ಕುರಿತು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಇದಕ್ಕಾಗಿ ಪೀಡಿಗಳು ಹೆದರುವ ಅಗತ್ಯವಿಲ್ಲ ಎಂದರು. ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಲಭ್ಯವಾಗುವ ಬೀಜ, ರಸಗೊಬ್ಬರ, ಓಷಧಗಳ ಸಂಗ್ರಹ ಮತ್ತು ವಿತರಣೆ ಬಗ್ಗೆ ಮಾಹಿತಿ ಪಡೆದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ, ಮೊರಾರ್ಜಿ ದೇಸಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಬಗ್ಗೆ ಚರ್ಚಿಸಿದ ಮಾನ್ಯರು, ವಸತಿ ನಿಲಯಗಳ ಪ್ರವೇಶಾತಿ, ಮಕ್ಕಳ ಹಾಜರಾತಿ ಕುರಿತು ಪರೀಶೀಲಿಸಿದರು. ಮಕ್ಕಳಿಗೆ ಸಕಾಲದಲ್ಲಿ ಊಟ-ಉಪಹಾರ ವಿತರಿಸಬೇಕು. ಶೇ.100ಅ ಫಲಿತಾಂಶ ಹೊಂದಲು ಶೈಕ್ಷಣಿಕ ಕ್ರಮ ಕೈಗೊಳ್ಳಿ. ಹೊಸ ವಸತಿ ನಿಲಯಗಳಿಗೆ ಜಾಗ ಮಂಜೂರಾತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಅಂಗನವಾಡಿ ಕೇಂದ್ರಗಳ ವ್ಯವಸ್ಥೆಯನ್ನು ಸರಿಪಡಿಸಬೇಕು ಅಲ್ಲಿ ಒಳ್ಳೆಯ ಗುಣಮಟ್ಟದ ಮತ್ತು ಸರಿಯಾಗಿ ಆಹಾರ ಪದಾರ್ಥಗಳನ್ನು ವಿತರಿಸಬೇಕು ವಾರ್ಡ್ನಲ್ಲಿ ಅಂಗನವಾಡಿ ಮಂಜೂರಾಗಿದ್ಯೋ ಅದನ್ನು ಅಲ್ಲಿಯೇ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ತಾಳಿಕೋಟಿ ತಾಪಂ ಅನುಸೂಯಕ ಚಲವಾದಿ, ಮುದ್ದೇಬಿಹಾಳ ತಾಪಂ ವೆಂಕಟೇಶ್ ವಂದಾಲ, ತಾಳಿಕೋಟಿ ತಹಸಿಲ್ದಾರ್ ಡಾ.ವಿನಯಾ ಹೂಗಾರ, ಮುದ್ದೇಬಿಹಾಳ ತಹಸಿಲ್ದಾರ್ ಕೀರ್ತಿ ಚಾಲಕ್, ಬಿಇಒ ಬಿಎಸ್ ಸಾವಳಗಿ, ಸಿಡಿಪಿಯು ಶಿವಮೂರ್ತಿ ಕುಂಬಾರ, ಟಿಎಚ್‌ಒ ಡಾ.ಸತೀಶ ತಿವಾರಿ, ಕೃಷಿ ಸಹಾಯಕ ನಿರ್ದೇಶಕ ಸುರೇಶ ಬಾವಿಕಟ್ಟಿ, ಸಿಪಿಐ ಮಹಮ್ಮದ್ ಫಸಿಯುದ್ದೀನ, ತಾಲೂಕಾ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಇದ್ದರು.