ಸಾಧನೆಗೆ ಸಂದ ಗೌರವ
ಬೆಳಗಾವಿ 19: ಕೌಟುಂಬಿಕ ಪರಿಸರ ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಮಕ್ಕಳು ತಂದೆ-ತಾಯಿಗಳ ನಡೆ-ನುಡಿ ಅನುಸರಿಸಿ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎನ್ನುವದಕ್ಕೆ ಮುಖ್ಯಮಂತ್ರಿ ಪದಕ ಪುರಸ್ಕೃತ ಘಟಪ್ರಭಾ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಡಿ. ಮುಲ್ಲಾ ಅವರೇ ಸಾಕ್ಷಿಯಾಗಿದ್ದಾರೆ.
ತಂದೆ ದಸ್ತಗೀರಸಾಬ ಮುಲ್ಲಾ ಪೊಲೀಸ್ ಇಲಾಖೆಯಲ್ಲಿದ್ದು ಜೊತೆಗೆ 2012ರಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದರು. ಆಗ ಪುತ್ರ ಎಚ್.ಡಿ. ಮುಲ್ಲಾ ಅವರು ಪಿ.ಎಸ್.ಐ. ಎಂದು ಸೇವೆ ಸಲ್ಲಿಸುತ್ತಿದ್ದರು. ಪೊಲೀಸ್ ಇಲಾಖೆಗೆ ಸೇರಬೇಕೆನ್ನುವ ತವಕ, ಇಲಾಖೆಯಲ್ಲಿನ ಭದ್ರತೆ ಕೆಲಸ ಇತ್ಯಾದಿ ಗುಣಗಳು ಇಲಾಖೆಯಲ್ಲಿದ್ದ ತಂದೆಯಿಂದಲೇ ಬಳುವಳಿಯಾಗಿ ಬಂದವು ಎನ್ನಲಾಗಿದೆ.
ಅವರ ಪುತ್ರ ಸಧ್ಯ ಘಟಪ್ರಭಾ ಠಾಣೆಯ ಇನ್ಸ್‌ಪೆಕ್ಟರ್‌ರಾಗಿ ಸೇವೆ ಸಲ್ಲಿಸುತ್ತಿರುವ ಎಚ್.ಡಿ. ಮುಲ್ಲಾ ಅವರೂ ಸಹ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕಾರಕ್ಕೆ ಭಾಜನರಾಗಿ ಇತ್ತೀಚಿಗೆ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪ್ರಶಸ್ತಿ ಸ್ವೀಕರಿಸಿ ತಂದೆಯವರಂತೆ ಸಿ.ಎಂ. ಪದಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ಸ್‌ಪೆಕ್ಟರ್ ಮುಲ್ಲಾ ಅವರು ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದವರು ಹುಬ್ಬಳ್ಳಿ- ಧಾರವಾಡದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದರು ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿ ಪಿ.ಯು.ಸಿ, ಪದವಿ ಶಿಕ್ಷಣ ಮುಗಿಸಿದರು. ಎಂ.ಕಾಂ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು.
3-9-2007 ರಲ್ಲಿ ಪಿ.ಎಸ್.ಐ. ಎಂದು ಪೊಲೀಸ್ ಇಲಾಖೆಗೆ ಸೇರಿದರು. ಮೈಸೂರು ತರಬೇತಿ ಶಾಲೆಯಲ್ಲಿ ತರಬೇತಿ ಮುಗಿಸಿದರು.
ಪಿ.ಎಸ್.ಐ. ಆಗಿ ರಾಮನಗರ, ಚನ್ನಪಟ್ಟಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹುಕ್ಕೇರಿ ಸಂಕೇಶ್ವರ, ನಿಪ್ಪಾನಿಗಳಲ್ಲಿ ಕರ್ತವ್ಯವನ್ನು ನಿಭಾಯಿಸಿದರು.
2019 ರಲ್ಲಿ ಇನ್ಸ್‌ಪೆಕ್ಟರ್‌ರಾಗಿ ಬಡ್ತಿ ಹೊಂದಿದರು ಬೆಳಗಾವಿ ಆಯುಕ್ತರ ಕಾರ್ಯಾಲಯ, ಚಡಚಣ, ರಾಯಬಾಗಗಳಲ್ಲಿ ಸೇವೆ ಸಲ್ಲಿಸಿದರು. ಅಕ್ಟೋಬರ 2024 ರಿಂದ ಘಟಪ್ರಭಾ ಠಾಣೆಯ ಇನ್ಸ್‌ಪೆಕ್ಟರ್‌ರಾಗಿ ಸೇವೆ ಮುಂದುವರಿಸಿದ್ದಾರೆ.
ತಮ್ಮ ಸೇವಾವಧಿಯಲ್ಲಿ ಕೊಲೆ, ದರೋಡೆ ಪ್ರಕರಣ ಭೇದಿಸುವದು, ಸಾರ್ವಜನಿಕರ ಜೊತೆ ಉತ್ತಮ ಸಮನ್ವಯತೆ ಬೆಳೆಸಿಕೊಳ್ಳುವುದು, ಕರ್ತವ್ಯದಲ್ಲಿ ನಿಷ್ಠತೆ, ಕಟ್ಟು-ನಿಟ್ಟಾಗಿ ಬಂದೋಬಸ್ತ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಮುಖ್ಯಮಂತ್ರಿ ಪದಕಕ್ಕೆ ಪರಿಗಣಿಸುತ್ತಾರೆ. ಮುಲ್ಲಾ ಅವರು ಈ ಎಲ್ಲ ಅಂಶಗಳನ್ನು ಸಾಧಿಸಿ ಪದಕಕ್ಕೆ ಭಾಜನ ಆಗಿರುವದು ಒಂದು ಹೆಗ್ಗಳಿಕೆ ಎಂದೇ ಹೇಳಬಹುದು.
2019 ರಲ್ಲಿ ಕೋವಿಡ್ ವೈರಸ್‌ದ ಅತ್ಯಂತ ಸವಾಲಿನ, ಭಯದ ವಾತಾವರಣದಲ್ಲಿ ಇರುವ ವಿಶೇಷ ಕರ್ತವ್ಯ ನಿರ್ವಹಿಸಿದ್ದಾರೆ. ರಾಯಬಾಗದಲ್ಲಿ ಸೇವೆಯಲ್ಲಿದ್ದಾಗ ಬಸ್, ರೈಲು ಪ್ರಯಾಣದಲ್ಲಿ ಕೋವಿಡ್ ಪಾಸಿಟಿವ್ ಬಂದವರನ್ನು ಪತ್ತೆ ಮಾಡಿ ಚಿಕಿತ್ಸೆಗೆ ದಾಖಲಿಸುವುದು ಉಳಿದ ಪ್ರಯಾಣಿಕರ ಪ್ರಯಾಣದ ವಿವರ ತಿಳಿದು ಕೋವಿಡ್ ಹರಡದಂತೆ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳುವದು ಇವರ ಕರ್ತವ್ಯದಲ್ಲಿ ಸವಾಲಿನ ಕೆಲಸ ಆಗಿತ್ತು.
ರಾಯಬಾಗದಲ್ಲಿ ಓರ್ವ ವ್ಯಕ್ತಿ ಸಾಲ ಮಾಡಿ ತನ್ನ ಪತ್ನಿಗೆ ವ್ಹಿಡಿಯೋ ಕಾಲ್ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾಗ ಮೋಬೈಲ್ ಲೋಕೇಶನ್ ಆಧರಿಸಿ ಅವನನ್ನು ಪತ್ತೆ ಮಾಡಿ ಜೀವ ರಕ್ಷಣೆ ಮಾಡಿದ್ದು ಒಂದು ಅವಿಸ್ಮರಣಿಯ ಘಟನೆ ಎಂಬುದನ್ನು ಸ್ಮರಿಸುತ್ತಾರೆ.