ಕಲಬುರಗಿ, ಫೆ.6, ಶ್ರೀ ವಿಜಯ ಪ್ರಧಾನ ವೇದಿಕೆ, ಕನ್ನಡ ಭಾಷೆಯ ಮೇಲಿನ ಸಂಶೋಧನೆ ಮತ್ತು ಅದರ ಶಾಸ್ತ್ರೀಯ ಭಾಷಾ ಸಂಸ್ಥೆ ನಿರ್ಮಾಣ ಮಾಡಲು ಯಾವುದೇ ಸರಕಾರ ಉತ್ಸಾಹ ತೋರಿಸಿಲ್ಲ. ಈ ಕುರಿತು ಈಗಿನ ಸರಕಾರ ಚಿಂತನೆ ನಡೆಸಬೇಕಿದೆ ಎಂದು ಸಂಶೋಧಕ ಡಾ.ಷ.ಶೆಟ್ಟರ್ ಹೇಳಿದ್ದಾರೆ. 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು ವಿಜಯ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಿದ್ದ "ಕನ್ನಡ ಉಳಿಸಿ ಬೆಳೆಸುವ ಕುರಿತ ವಿಶೇಷ ಉಪನ್ಯಾಸ" ದಲ್ಲಿ ಅವರು ಮಾತನಾಡಿದರು.
ಕನ್ನಡ ಶಾಸ್ತ್ರೀಯ ಭಾಷೆಗೆ ಅನೇಕ ಹೋರಾಟಗಳು ನಡೆದಿವೆ. ದಕ್ಷಿಣ ಭಾಷೆಗಳಲ್ಲಿ ಕನ್ನಡ ಪುರಾತನವಾದ ಭಾಷೆಯಾಗಿದೆ. 10 ವರ್ಷಗಳ ನಿರಂತರ ಹೋರಾಟದಿಂದ ತಮಿಳಿಗೆ ಪ್ರತಿಸ್ಪರ್ಧಿಯಾಗಿ ಶಾಸ್ತ್ರೀಯ ಸ್ಥಾನವನ್ನು ಕನ್ನಡ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಕನ್ನಡ ಭಾಷೆಯ ಮೇಲೆ ನಡೆಯುವ ಸಂಶೋಧನೆಗಳು ಕುಂದಿವೆ. ಭಾಷಾ ಸಂಶೋಧನೆಯನ್ನು ಪ್ರೋತ್ಸಾಹಿಸಲು ಶಾಸ್ತ್ರೀಯ ಭಾಷಾ ಸಂಸ್ಥೆ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜರ ಆಳ್ವಿಕೆ ಕಾಲಘಟ್ಟದ ಕನ್ನಡ ಪೋಷಣೆ ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ. ಕನ್ನಡ ಬೆಳೆಸುವಲ್ಲಿ ಅಧ್ಯಾಪಕರು, ಮಕ್ಕಳು ಮತ್ತು ಸರಕಾರ ಪಾತ್ರ ಮುಖ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ಮೂರು ವ್ಯಕ್ತಿಗಳ ಪಾತ್ರ ಶೋಚನೀಯವಾಗಿದೆ. ರಾಜ್ಯ ಸರಕಾರ ಕನ್ನಡಪರ ಯೋಜನೆಗಳನ್ನು ಘೋಷಿಸುವ ಮೂಲಕ ತನ್ನ ಜವಾಬ್ದಾರಿ ನಿಭಾಯಿಸಿದೆ. ಶಾಲೆಗಳ ನಿರ್ಮಾಣದಿಂದ ಕನ್ನಡ ಉಳಿಯಬಹುದು. ಆದರೆ ಸರಕಾರಕ್ಕೆ ಆಪತ್ತು ಬರಬಹುದು, ಆದರೆ ಕನ್ನಡವನ್ನು ಕಡೆಗಣಿಸುವ ಮಾತೇ ಇಲ್ಲ. ಒಂದು ವೇಳೆ ಅಂತಹ ಆಪತ್ತು ಬಂದಾಗ ಕನ್ನಡ ಜನರೇ ಉತ್ತರಿಸುತ್ತಾರೆ. ಮಕ್ಕಳಲು ಮನೆಯಲ್ಲಿ ಕನ್ನಡ ಮಾತನಾಡಿ, ರಸ್ತೆಯಲ್ಲಿ ಇಂಗ್ಲಿಷ್ ಮಾತನಾಡುವುದು ಕೀಳಿರಿಮೆಯ ಪ್ರತಿಬಿಂಬವಾಗಿದ್ದು, ತೋರ್ಪಡಿಕೆಗೆ ಮಾತನಾಡುತ್ತಾರೆ. ಪ್ರಾಧ್ಯಾಪಕರು ತಮ್ಮ ಮಕ್ಕಳಿಗೆ ಕನ್ನಡ ಭಾಷಾ ಮಾಧ್ಯಮ ಶಾಲೆಗಳಲ್ಲಿ ವಿದ್ಯಾಭ್ಯಾಸ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾವಿರುವ ಕ್ಷೇತ್ರಗಳಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ. ಕವಿಗಳು-ಲೇಖನ, ಸಂಶೋಧಕ-ಸಂಶೋಧನಾ ಗ್ರಂಥ, ನಾಡಿನ ಪ್ರಜೆಗಳು ಭಾಷೆ ಮುಂದುವರಿಸಿಕೊಂಡು ಹೋಗಬೇಕು. ಇಂದು ಕನ್ನಡ ಉಳಿದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಕನ್ನಡಕ್ಕೆ ಅಳಿಗಾಲದ ಸಂಕೇತವಿಲ್ಲ. ಎಲ್ಲಿಯವರೆಗೆ ನಾವು ಕನ್ನಡ ಭಾಷೆ ಮಾತನಾಡುತ್ತೇವೋ ಅಲ್ಲಿಯ ತನಕ ನಮ್ಮ ಭಾಷೆಗೆ ಆಪತ್ತಿಲ್ಲ. ಅನೇಕ ಹೋರಾಟಗಳ ಮೂಲಕ 21ನೇ ಶತಮಾನದವರೆಗೂ ಕನ್ನಡ ಬಂದು ನಿಂತಿದೆ. ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರೆ ನೀಡಿದರು.
ತನ್ನ ಭಾಷೆ ಬೆಳೆಸದಿದ್ದರೆ ತನ್ನ ಬಗ್ಗೆ ಕೀಳರಿಮೆ ಹಾಗೂ ಆತಂಕಗಳು ಸೃಷ್ಟಿಯಾಗುತ್ತವೆ. ಬೆಂಗಳೂರಿನ ಶಾಲೆಯೊಂದರಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸಲು ಮುಂದಾಗಿದ್ದಾರೆ. ಭಾಷೆ ಬೆಳೆಸುವ ಅಥವಾ ಉಳಿಸುವುದೆಂದರೆ ಬೇರೊಂದು ಭಾಷೆಯನ್ನು ದ್ವೇಷಿಸುವುದಲ್ಲ. ಅನ್ಯಭಾಷೆಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು. ಕನ್ನಡ ಉಳಿಸುವ ಹಪಾಹಪಿ 2 ಸಾವಿರ ಹಿಂದಿನ ವರ್ಷಗಳಿಂದ ಮುಂದುವರಿದುಕೊಂಡು ಬಂದಿರುವ ಪರಂಪರೆ. ಅಂದಿನಿಂದ ಜೀವಂತವಾಗಿರುವ ಕನ್ನಡಕ್ಕೆ ಇಂದು ಅಳಿವಿನ ಪ್ರಶ್ನೆ ಇಲ್ಲ. ಬೆಳೆಸುವ ಕುರಿತು ಚಿಂತನೆ ಮಾಡಬೇಕಾಗಿದೆ ಎಂದು ಮಾಹಿತಿ ನಿಡಿದರು.