ದೇವರ ಹಾಗೂ ಮಹಾತ್ಮರ ಮೂರ್ತಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ದೇವರ ಹಾಗೂ ಮಹಾತ್ಮರ ಮೂರ್ತಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ Request to the Deputy Commissioner to provide adequate protection for the statues of deities and gre

ಲೋಕದರ್ಶನ ವರದಿ 

ಗದಗ 15: ಜಿಲ್ಲೆಯಲ್ಲಿ ದೇವರ ಹಾಗೂ ಮಹಾತ್ಮರ ಮೂರ್ತಿಗಳ ಮೇಲೆ ಪದೇ ಪದೇ ಹಾನಿ ಉಂಟಾಗುತ್ತಿರುವ ಘಟನೆಗಳು ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಮರ​‍್ಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಸಂಘಟನೆಗಳ ಮುಖಂಡ ರಾಜು ಖಾನಪ್ಪ ಆರೋಪಿಸಿದರು.  ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ವಿವಿಧ ದೇವಾಲಯಗಳಲ್ಲಿನ ಮೂರ್ತಿಗಳು ಹಾಗೂ ಮಹಾತ್ಮರ ಪ್ರತಿಮೆಗಳ ಮೇಲೆ ನಿರಂತರವಾಗಿ ದುಷ್ಕರ್ಮಿಗಳು ದಾಳಿ ನಡೆಸಿ ಹಾನಿಗೊಳಿಸುತ್ತಿದ್ದರೂ, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.  

ಘಟನೆ ನಡೆದಾಗ ಸಂಘಟನೆಗಳು ಮನವಿ ಸಲ್ಲಿಸಿದರೂ, ಕೆಲ ದಿನಗಳ ಬಳಿಕ ಪ್ರಕರಣಗಳು ಮರೆತು ಹೋಗುತ್ತವೆ. ಇದೇ ರೀತಿಯಾಗಿ ಅಧಿಕಾರಿಗಳ ನಿರ್ಲಕ್ಷ್ಯವೂ ಮುಂದುವರಿದಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.  ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಅಪರೂಪದ ಸರಸ್ವತಿ ದೇವಿಯ ಮೂರ್ತಿಯ ವಕ್ಷಸ್ಥಳಕ್ಕೆ ಹಾನಿ ಮಾಡಿರುವ ಘಟನೆ ಖಂಡನೀಯವಾಗಿದೆ. ಇಂತಹ ಪುರಾತನ ಸ್ಮಾರಕಗಳಿಗೆ ಹಾನಿಯಾದರೂ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಬದಲು ದೂರುಗಾಗಿ ಕಾಯುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.  

ಲಕ್ಕುಂಡಿ ಸೇರಿದಂತೆ ಜಿಲ್ಲೆಯ ಹಲವು ಐತಿಹಾಸಿಕ ಸ್ಥಳಗಳಲ್ಲಿಯೂ ಮೂರ್ತಿಗಳಿಗೆ ಹಾನಿ ಮಾಡಲಾಗಿದೆ. ಹಿರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮಹಾತ್ಮ ಗಾಂಧಿ ಹಾಗೂ ಶಾಲೆಗೆ ಜಮೀನು ದಾನ ನೀಡಿದ್ದ ಸೋಮಶೇಖರಯ್ಯ ಹುಚ್ಚಯ್ಯ ಗಣಾಚಾರಿ ಅವರ ಪ್ರತಿಮೆಗಳಿಗೂ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ ಎಂದು ಹೇಳಿದರು.  

ಮಹಾತ್ಮ ಗಾಂಧಿ ಪ್ರತಿಮೆಯ ಕಿವಿ ಮುರಿದು, ಅದರಲ್ಲಿದ್ದ ಲೋಹದ ಸರವನ್ನು ಕಳವು ಮಾಡಲಾಗಿದೆ. ಸೋಮಶೇಖರಯ್ಯ ಹುಚ್ಚಯ್ಯ ಗಣಾಚಾರಿ ಅವರ ಪ್ರತಿಮೆಯ ತಲೆಯನ್ನು ಕತ್ತರಿಸಿ ಹಾನಿಗೊಳಿಸಲಾಗಿದ್ದು, ಈ ಪ್ರಕರಣಗಳಲ್ಲಿಯೂ ಸಮರ​‍್ಕ ತನಿಖೆ ನಡೆದಿಲ್ಲ ಎಂದು ಆರೋಪಿಸಿದರು.  ಐತಿಹಾಸಿಕ ದೇವಾಲಯಗಳು, ಶಿಲ್ಪಕಲೆ ಹಾಗೂ ಪುರಾತನ ಮೂರ್ತಿಗಳು ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಅಮೂಲ್ಯ ಸಂಪತ್ತಾಗಿವೆ. ಆದ್ದರಿಂದ ಅವುಗಳ ಸಂರಕ್ಷಣೆಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.  

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್‌. ದುರ್ಗೇಶ್, ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಮಹೇಶ್ ರೋಕಡೆ, ಭರತ್ ಲದ್ದಿ, ಕುಮಾರ ನಡಗೇರಿ, ಕುಮಾರ ಮಿಟ್ಟಿಮಠ, ಆನಂದ ಅರಕೇರಿ, ಮಹೇಶ್ ಬಡಿಗೇರ, ಮಂಜು ಪೂಜಾರ, ವೀರಣ್ಣ ಹೆಬ್ಬಸೂರ, ಬಸಯ್ಯ ಗಣಾಚಾರಿ, ಬಸವರಾಜ ಯಳವತ್ತಿ, ಮಹೇಶ್ ಕಂಬಾರ, ಪರಮೇಶ ಬೆಂತೂರ, ಬಸವರಾಜ ನವಲಿ, ಅಶೋಕ್ ಬಜಂತ್ರಿ, ಮುತ್ತಣ್ಣ ವಾಲ್ಮೀಕಿ, ಹುಲಿಗೆಪ್ಪ ವಾಲ್ಮೀಕಿ, ಶಿವಯೋಗಿ ಹಿರೇಮಠ, ಸುನೀಲ ಮುಳ್ಳಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು