ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಶೀಘ್ರ ದಿನಾಂಕ ನಿಗದಿಪಡಿಸಲು ಮನವಿ

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಶೀಘ್ರ ದಿನಾಂಕ ನಿಗದಿಪಡಿಸಲು ಮನವಿ  Request to fix a date soon for the unveiling of the Maharshi Valmiki statue.


ಬಳ್ಳಾರಿ 04: ನಗರದ ವಾಲ್ಮೀಕಿ ವೃತ್ತದಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ಶೀಘ್ರವಾಗಿ ನಡೆಸುವಂತೆ ಬಳ್ಳಾರಿ ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ. ಜಯರಾಮ್ ಮನವಿ ಮಾಡಿದ್ದಾರೆ.  

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುತ್ಥಳಿ ನಿರ್ಮಾಣವಾಗಿ ಹಲವು ತಿಂಗಳು ಕಳೆದರೂ ಇದುವರೆಗೆ ಅನಾವರಣ ಕಾರ್ಯಕ್ರಮ ನಡೆದಿಲ್ಲ. ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಶೀಘ್ರವಾಗಿ ದಿನಾಂಕ ನಿಗದಿಪಡಿಸಿ ಪುತ್ಥಳಿಯನ್ನು ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿದರು.  

ಪುತ್ಥಳಿ ಅನಾವರಣಕ್ಕೆ ಸಹಕರಿಸಿದ ನಗರ ಶಾಸಕ ಭರತ್ ರೆಡ್ಡಿ, ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಗಣೇಶ್, ಬಿ.ಎಂ. ನಾಗರಾಜ್, ಅನ್ನಪೂರ್ಣ ಹಾಗೂ ಸಂಸದ ತುಕಾರಾಂ ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದರು.  

ವಾಲ್ಮೀಕಿ ಸಮಾಜದ ಮುಖಂಡ ವಿಕೆ ಬಸಪ್ಪ ಮಾತನಾಡಿ, ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಾಗೂ ಹಬ್ಬದ ವಾತಾವರಣದಲ್ಲಿ ನಡೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ ದಿನಾಂಕವನ್ನು ಶೀಘ್ರ ನಿಗದಿಪಡಿಸುವಂತೆ ಮುಖ್ಯಮಂತ್ರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.  

ಸಮಾಜದ ಹಿರಿಯ ಮುಖಂಡರಾದ ಸತೀಶ್ ಜಾರಕಿಹೊಳಿ, ಬಿ. ನಾಗೇಂದ್ರ, ಕೆ.ಎನ್‌. ರಾಜಣ್ಣ ಸೇರಿದಂತೆ ಹಲವರು ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಆಸಕ್ತಿ ವಹಿಸಿ ಸಹಕರಿಸಿದ್ದಾರೆ. ಅವರ ಪ್ರಯತ್ನವನ್ನು ಮುಂದುವರಿಸಿ ಶೀಘ್ರ ಅನಾವರಣ ಕಾರ್ಯಕ್ರಮ ನಡೆಸಬೇಕು ಎಂದು ಮನವಿ ಮಾಡಿದರು.  

ಮೋಕ್ಷ ಮುದ್ದಿಮಲ್ಲಯ್ಯ ಮಾತನಾಡಿ, ವಾಲ್ಮೀಕಿ ಸಮಾಜದವರು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗದೆ, ಸಮಾಜದ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.  

ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡದೆ, ಎಲ್ಲ ಪಕ್ಷಗಳಲ್ಲಿರುವ ವಾಲ್ಮೀಕಿ ಸಮುದಾಯದ ಮುಖಂಡರು ಪಕ್ಷಭೇದ ಮರೆತು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.  

ಸುದ್ದಿಗೋಷ್ಠಿಯಲ್ಲಿ ಬಿ. ರುದ್ರ​‍್ಪ, ಹಗರಿ ಗೋಪಾಲ್, ಎರುಗಡಿ ಗೋಪಾಲ್, ಸತ್ಯನಾರಾಯಣ, ದುರ್ಗಪ್ಪ, ಅವ್ವಮ್ಮ ಬಾವಿ ಲೋಕೇಶ್, ಅಳ್ಳಿಪುರ ಲೋಕೇಶ್, ಹಗರಿ ಜನಾರ್ದನ, ಸಂಗನಕಲ್ಲು ವಿಜಯಕುಮಾರ್ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.