ಬಿಳಗಿ - ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸ್ಟಾಫ್ ನೇಮಿಸಲು ಮನವಿ

ಬಿಳಗಿ - ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸ್ಟಾಫ್ ನೇಮಿಸಲು ಮನವಿ  Request to appoint necessary staff for Bilagi - Dodmane Primary Health Center

ಕಾರವಾರ 19: ಸಿದ್ದಾಪುರ ತಾಲ್ಲೂಕಿನ ಬಿಳಗಿ ಹಾಗೂ ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸ್ಟಾಫ್ ನರ್ಸ್ಗಳನ್ನು ನೇಮಕ ಮಾಡುವಂತೆ ಹಾಗೂ ಸಿದ್ದಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್ ಅಳವಡಿಸಿ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸುವಂತೆ ಸ್ಥಳೀಯರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಿಳಗಿ, ದೊಡ್ಮನೆ ಹಾಗೂ ತಾಲ್ಲೂಕಿನ ವಿವಿಧೆಡೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ನರ್ಸ್ಗಳ ಸಮಸ್ಯೆ ಇತ್ತು. ಈ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಕಳೆದ ಒಂದು ವಾರದಿಂದ ಬಿಳಗಿ ಹಾಗೂ ದೊಡ್ಮನೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಲಾಗಿದೆ. ಆದರೆ ವೈದ್ಯರಿಗೆ ಪೂರಕವಾಗಿ ಕೆಲಸ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಟಾಫ್ ನರ್ಸ್ಗಳು ಇಲ್ಲ. ಇದರಿಂದ ಬಂದ ವೈದ್ಯರಿಗೂ ಹಾಗೂ ಜನರಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.ಇದಲ್ಲದೆ ಸಿದ್ದಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಈವರೆಗೂ ಸ್ಕ್ಯಾನಿಂಗ್ ಮಷಿನ್ ಇಲ್ಲ. ಇದರಿಂದ ಆಸ್ಪತ್ರೆಗೆ ಆಗಮಿಸುವ ಪ್ರತಿಯೊಬ್ಬರು ದೂರದ ಸಾಗರಕ್ಕೆ ಸ್ಕ್ಯಾನಿಂಗ್‌ಗೆ ತೆರಳಬೇಕಾಗಿದೆ. ಈ ಕಾರಣ ರೋಗಿಗಳಿಗೂ ತೊಂದರೆಯಾಗಲಿದ್ದು, ವೈದ್ಯರಿಗೂ ತಕ್ಷಣ ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ತಾಲ್ಲೂಕು ಆಸ್ಪತ್ರೆಗೆ ತೀರಾ ಅಗತ್ಯವಿರುವ ಸ್ಕ್ಯಾನಿಂಗ್ ಮಷೀನ್‌ಗಳನ್ನು ಕೂಡಲೇ ಅಳವಡಿಸಬೇಕು.ಸಿದ್ದಾಪುರ ತಾಲ್ಲೂಕು ಗುಡ್ಡಗಾಡು ಪ್ರದೇಶಗಳಿಂದಲೇ ಕೂಡಿದ್ದು, ಸರಿಯಾದ ಬಸ್ ಸಂಪರ್ಕ ಇರುವುದಿಲ್ಲ. ಒಮ್ಮೆ ತಾಲ್ಲೂಕು ಕೇಂದ್ರಕ್ಕೆ ಬಂದರೇ ಒಂದು ದಿನದ ಸಮಯ ವ್ಯರ್ಥವಾಗಲಿದೆ. ಅಲ್ಲದೆ ಸ್ಕಾನಿಂಗ್‌ಗೆ ಮತ್ತೆ ಸುತ್ತಾಡಬೇಕಾದರೇ  ತೊಂದರೆಯಾಗುವ ಕಾರಣ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕವಾದ ವೈದ್ಯರುಗಳನ್ನು ಖಾಯಂ ಇರುವಂತೆ  ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮನವಿಯನ್ನು ನೀಡುವಾಗ   ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ.ಎನ್‌. ನಾಯ್ಕ ಬೇಡ್ಕಣಿ, ದೊಡ್ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಸಂತ ಹೆಗಡೆ ಹಳ್ಳಿಬೈಲ್ ಇದ್ದರು.