ಲಾಹೋರ್, ಏ 15,ಕ್ರಿಕೆಟ್ ನಲ್ಲಿ ನಡೆಯುವ ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಅನ್ನು ಅಪರಾಧೀಕರಿಸುವ ಕಾನೂನನ್ನು ರೂಪಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರ್ಕಾರವನ್ನು ಕೋರಿದೆ.ಈ ಕುರಿತು ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯಿಸಿರುವ ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿ, '' ನಾನು ಈ ಕುರಿತಂತೆ ಸರ್ಕಾರದೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಏಕೆಂದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾದಂತಹ ಇತರ ಕ್ರಿಕೆಟ್ ಆಡುವ ರಾಷ್ಟ್ರಗಳು ಮ್ಯಾಚ್ ಫಿಕ್ಸಿಂಗ್ ಅನ್ನು ಕ್ರಿಮಿನಲ್ ಅಪರಾಧವನ್ನಾಗಿಸುವ ಕಾನೂನನ್ನು ಜಾರಿಗೆ ತಂದಿವೆ, '' ಎಂದು ಹೇಳಿದ್ದಾರೆ.ಮ್ಯಾಚ್ ಫಿಕ್ಸಿಂಗ್ ವಿರುದ್ಧ ಕಾನೂನು ರೂಪಿಸುವಾಗ ಶ್ರೀಲಂಕಾ ಮಂಡಳಿ ಅಳವಡಿಸಿಕೊಂಡಿರುವ ಕಾರ್ಯವಿಧಾನವನ್ನು ನಿಕಟವಾಗಿ ಅನುಸರಿಸಲಾಗುವುದು ಎಂದಿರುವ ಅವರು, '' ಅವರ ಕಾರ್ಯವಿಧಾನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಕ್ರಿಕೆಟ್‌ನಲ್ಲಿನ ಭ್ರಷ್ಟಾಚಾರವನ್ನು ಅಪರಾಧ ಕೃತ್ಯವೆಂದು ಪರಿಗಣಿಸಬೇಕೆಂದು ನಾವು ಬಯಸುತ್ತೇವೆ" ಎಂದು ಹೇಳಿದ್ದಾರೆ.