ಶೈಕ್ಷಣಿಕ ಪ್ರತಿಭಾ ಪುರಸ್ಕಾರಕ್ಕೆ ಮನವಿ

ಶೈಕ್ಷಣಿಕ ಪ್ರತಿಭಾ ಪುರಸ್ಕಾರಕ್ಕೆ ಮನವಿ  Request for Academic Merit Award

ಲೋಕದರ್ಶನ ವರದಿ  

ಗದಗ, ಆ. 28: ಅವಳಿ ನಗರವಾದ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ದೈವಜ್ಞ ಸಮಾಜೋನ್ನತಿ ಸಂಘದ ಸಹಯೋಗದಲ್ಲಿ ದೈವಜ್ಞ ಯುವಕ ಮಂಡಳಿ ಹಾಗೂ ದೈವಜ್ಞ ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯಂದು ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಯನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.  

ವಿದ್ಯಾರ್ಥಿಗಳ ಉಜ್ವಲ ಶೈಕ್ಷಣಿಕ ಭವಿಷ್ಯ ಹಾಗೂ ಸಮಾಜದಲ್ಲಿ ಹೊಸ ಚೈತನ್ಯ ಮೂಡಿಸುವ ಉದ್ದೇಶದಿಂದ ಗಣೇಶ ಚತುರ್ಥಿಯ ವೇದಿಕೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪುರಸ್ಕಾರ ನೀಡಲಾಗುತ್ತಿದೆ. ಆದರೆ, ಸಮಾಜದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಈ ಪುರಸ್ಕಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.  

ಇತರೆ ಸಂಘ-ಸಂಸ್ಥೆಗಳು ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿವೆ. ಅದೇ ರೀತಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದಿಂದಲೂ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಗೌರವಿಸಿದರೆ, ಸಮಾಜದ ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  

2025-26ನೇ ಸಾಲಿನಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗುರುತಿಸಿ, ದೈವಜ್ಞ ಯುವಕ ಮಂಡಳಿ ವತಿಯಿಂದ ಶ್ರೀ ಗಜಾನನ ವೇದಿಕೆಯಲ್ಲಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ದೈವಜ್ಞ ಸಮಾಜೋನ್ನತಿ ಸಂಘದ ಪದಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ದೈವಜ್ಞ ಸಮಾಜೋನ್ನತಿ ಸಂಘದ ಅಧ್ಯಕ್ಷ ಅರವಿಂದ ಪಾಲನಕರ, ಗೌರವಾಧ್ಯಕ್ಷ ಗಣಪತಿ ಪಾಲನಕರ, ಚೇತನ್ ಪಾಲನಕರ, ಸಂಘದ ಕೋಶಾಧ್ಯಕ್ಷ ಪ್ರಕಾಶ ವೇಣೇಕರ, ಪ್ರಧಾನ ಕಾರ್ಯದರ್ಶಿ ಕಿಶೋರ್ ರೇವಣಕರ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ, ಸುನೀಲ ದತ್ತಾತ್ರೇಯ ಪಾಲನಕರ, ಮಂಜುನಾಥ ಪಾಲನಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.