ಬೆಂಗಳೂರು, ಜ.17: ಜನವರಿ 26ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸುವಂತೆ ಸಾಮಾಜಿಕ ನ್ಯಾಯ ಪರಿಷತ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಪರಿಷತ್ ನ ಅಧ್ಯಕ್ಷ ಅನಂತರಾಯಪ್ಪ ಮಾತನಾಡಿ, ಗಣರಾಜೋತ್ಸವ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಕೇವಲ ಮಹಾತ್ಮ ಗಾಂಧೀಜಿ ಅವರ ಚಿತ್ರವನ್ನು ಮಾತ್ರ ಇಡಲಾಗುತ್ತದೆ. ಇದು ಅಂಬೇಡ್ಕರ್ ಅವರಿಗೆ 68 ವರ್ಷಗಳಿಂದ ಬಹಿರಂಗವಾಗಿ ಮಾಡುತ್ತಿರುವ ಅವಮಾನ ಎಂದು ಆರೋಪಿಸಿದರು.
ಜ.26 ರಂದು ಭಾರತ ಸಂಮಿಧಾನ ಜಾರಿಗೆ ಬಂದ ದಿನವಾಗಿದ್ದು, ಅಂದೇ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸದೇ ಇರುವುದು ವಿಪರ್ಯಾಸ. ಈ ಬಗ್ಗೆ ಸರ್ಕಾರಗಳು ಕಂಡು ಕಾಣದಂತೆ ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿಗಳು ಮುಂದಾಗಬೇಕಿದ್ದು, ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳೂ ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಕೂಡಲೇ ಸರ್ಕಾರ ಆದೇಶ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.