ವರದಿ: ಈರಣ್ಣಾ ಹುಲ್ಲೂರ
ಸವದತ್ತಿ 06: ಸಮೀಪದ ಅಸುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶಿಂಗಾರಗೋಪ್ಪ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಗ್ರಾಮಸ್ಥರು ಪರದಾಡುವಂತೆ ಆಗಿದೆ.
ಬೇಸಿಗೆ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಗ್ರಾಮಕ್ಕೆ ನೀರು ಎಂಬ ಜೀವ ಜಲ ಯಾವಾಗ ಬರುತ್ತಿದೆ ಎಂದು ಬಾಯ್ದೆರೆದು ಕಾಯ್ದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ಸಮಸ್ಯೆ ಏನು?: ಗ್ರಾಮಕ್ಕೆ ಸಮೀಪದ ಮಲಪ್ರಭಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಕ್ಕೆ ಬರುವ ನೀರನ್ನು ಯಂತ್ರಗಳ ಮೂಲಕ ಆರಂಭದಲ್ಲಿಯೇ ಎತ್ತಿ ಹಾಕಿಕೊಳ್ಳುತ್ತಿರುವುದರಿಂದ ಅರ್ಧ ಭಾಗಕ್ಕೆನೀರೇ ಬರುತ್ತಿಲ್ಲ.ಶಿಂಗಾರಗೋಪ್ಪ, ಅಸುಂಡಿ ಗ್ರಾಮದ ಬಹುತೇಕಡೆ ಜನರು ಹದಿನೈದು ದಿನಗಳಿಂದ ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ನೀರು ಸರಬರಾಜು ಮಾಡುವಂತೆ ತಾಲೂಕ ಪಂಚಾಯತ ಇಓ ಹಾಗೂ ವಾಟರ್ ಸಪ್ಲಾಯರ್ ಎಇಇ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಅಸುಂಡಿ ಹಾಗೂ ಶಿಂಗಾರಗೋಪ್ಪ ಗ್ರಾಮಗಳಲ್ಲಿ 200 ರಿಂದ 300 ಕುಟಂಬಗಳು ವಾಸ ಮಾಡುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಸಮಸ್ಯೆ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದೆ. ನೀರು ಪೂರೈಕೆ ಮಾಡುವ ವಾಟರ್ ಮೆನ್‌ಗಳನ್ನು ಕೇಳಿದರೆ ಬೆಳಿಗ್ಗೆ ಬಿಡ್ತೀವಿ, ಸಂಜೆ ಬಿಡ್ತೀವಿ, ಕರೆಂಟ್ ಬಂದ್ ಮೇಲೆ ಬಿಡ್ತೀವಿ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಈ ಗ್ರಾಮದ ಕಾಲೊನಿಯ ಜನರು ನೀರಿಗಾಗಿ ಕಾಯುವುದೇ ಒಂದು ಕೆಲಸವಾಗಿದೆ.
ನಾಗಪ್ಪ ಧಾರವಾಡ, ಸುರೇಶ ಕಂಪ್ಲಿ, ವಿಠ್ಠಲ ತಳವಾರ, ಸುರೇಶ ತಡಕೊಡ, ಮಾಂತೇಶ ಬಾನಿ, ನೀಲಕಂಠ ಹಡಪದ, ಮಂಜು ಅಣ್ಣಿಗೇರಿ, ಮಂಜು ಮಾದರ, ಮಡ್ಯಪ್ಪ ಸಾಲಿಮನಿ, ಅನಿಲ ಸಾಲಿಮನಿ, ಆನಂದ ಜಾದವ, ಶಿವಾನಂದ ಅಬ್ಬಾರ, ಮೌನೇಶ ಪತ್ತಾರ, ಈರ್ಪ ಪತ್ತಾರ ಸೇರಿದಂತೆ ಅನೇಕರು ಇದ್ದರು.