ಬ್ಯಾಂಕಾಕ್, ನ. 6: ಪ್ರತ್ಯೇಕತಾವಾದಿ ಬಂಡುಕೋರರು ಕೇಂದ್ರ ಥೈಲ್ಯಾಂಡ್ನ ದಕ್ಷಿಣದ ಮುವಾಂಗ್ ಜಿಲ್ಲೆಯ ಭದ್ರತಾ ತಪಾಸಣಾ ಕೇಂದ್ರದಲ್ಲಿ ತಡರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗ್ರಾಮ ರಕ್ಷಣಾ ಸ್ವಯಂಸೇವಕರು ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಹತ್ತು ಬಂಡುಕೋರರು ರಬ್ಬರ್ ತೋಟದ ಮೂಲಕ ಚೆಕ್ಪಾಯಿಂಟ್ ಕಟ್ಟಡಕ್ಕೆ ಪ್ರವೇಶಿಸಿ ಮಂಗಳವಾರ 9.30ರ ಸುಮಾರಿಗೆ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ. ಮೃತರಲ್ಲಿ 11 ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳು ಸೇರಿದ್ದಾರೆ, ಮುಖ್ಯವಾಗಿ ಕರ್ತವ್ಯದಲ್ಲಿದ್ದ ರಕ್ಷಣಾ ಸ್ವಯಂಸೇವಕರಾಗಿದ್ದಾರೆ. ಗಾಯಗೊಂಡ ನಾಲ್ವರು ಸಹೋದ್ಯೋಗಿಗಳು ನಂತರ ಯಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇತರ ಮೂವರಿಗೆ ಚಿಕಿತ್ಸೆ ನೀಡಲಾಗಿದ್ದರೆ, ಇಬ್ಬರು ರಕ್ಷಣಾ ಸ್ವಯಂಸೇವಕರು ದಾಳಿಯಿಂದ ಪಾರಾಗಿದ್ದಾರೆ. ದಾಳಿಕೋರರು ಸಂತ್ರಸ್ತರ ಆಯುಧಗಳನ್ನು ಕದ್ದಿದ್ದಾರೆ. ಅದೇ ಸಮಯದಲ್ಲಿ, ಇತರ ಎರಡು ಚೆಕ್ಪೋಸ್ಟ್ಗಳ ಮೇಲೂ ದಾಳಿ ನಡೆಸಲಾಯಿತು, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಇದು ಶಂಕಿತ ಬಂಡುಕೋರರ ಕೃತ್ಯ' ಎಂದು ಪ್ರಾದೇಶಿಕ ಭದ್ರತಾ ವಕ್ತಾರ ಕರ್ನಲ್ ಪ್ರಮೋಟ್ ಪ್ರೋಮ್-ಇನ್ ತಿಳಿಸಿದ್ದಾರೆ. "ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ" ಎಂದು ಅವರು ಹೇಳಿದರು. ಬೌದ್ಧರ ಪ್ರಾಬಲ್ಯದ ಥೈಲ್ಯಾಂಡ್ನಲ್ಲಿ ಮಲಯ್-ಮುಸ್ಲಿಂ ಪ್ರಾಂತ್ಯಗಳಾದ ಯಲಾ, ಪಟ್ಟಾನಿ ಮತ್ತು ನಾರತಿವಾತ್ನಲ್ಲಿ ಒಂದು ದಶಕಗಳಷ್ಟು ಹಳೆಯದಾದ ಪ್ರತ್ಯೇಕತಾವಾದಿ ಗುಂಪು ನಡೆಸಿದ ದಂಗೆಯಲ್ಲಿ 2004 ರಿಂದ ಇದುವರೆಗೆ ಸುಮಾರು 7,000 ಜನರು ಸಾವನ್ನಪ್ಪಿದ್ದಾರೆ ಎಂದು ಹಿಂಸಾಚಾರದ ಮೇಲ್ವಿಚಾರಣೆ ಮಾಡುವ ಡೀಪ್ ಸೌತ್ ವಾಚ್ ಸಂಸ್ಥೆ ತಿಳಿಸಿದೆ. ಥೈಲ್ಯಾಂಡ್ನ ದಕ್ಷಿಣದಲ್ಲಿ ನಡೆದ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಇದುವರೆಗೆ ವಹಿಸಿಕೊಂಡಿಲ್ಲ. 1909ರಲ್ಲಿ ಥೈಲ್ಯಾಂಡ್ ವಶಪಡಿಸಿಕೊಳ್ಳುವ ಮೊದಲು, ಯಲಾ, ಪಟ್ಟಾನಿ ಮತ್ತು ನಾರತಿವಾತ್ ಪ್ರದೇಶಗಳು ಸ್ವತಂತ್ರ ಮಲಯ್ ಮುಸ್ಲಿಂ ಸುಲ್ತಾನರ ಭಾಗವಾಗಿದ್ದವು. ದಕ್ಷಿಣದ ಕೆಲವು ಬಂಡಾಯ ಗುಂಪುಗಳು ಸ್ವತಂತ್ರ ರಾಜ್ಯ ಸ್ಥಾಪಿಸಲು ಹೋರಾಡುತ್ತಿವ.