ರಷ್ಯಾಗೆ ವೆಂಟಿಲೇಟರ್ ನೀಡಲು ಸಿದ್ಧ : ಟ್ರಂಪ್

ವಾಷಿಂಗ್ಟನ್, ಏ 16, ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಷ್ಯಾಗೆ ವೆಂಟಿಲೇಟರ್ ಗಳು ಅಗತ್ಯವಿದ್ದಲ್ಲಿ ನೀಡಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು, “ರಷ್ಯಾಗೆ ವೆಂಟಿಲೇಟರ್ ಅಗತ್ಯವಿರಬಹುದು ಎಂದು ನನಗನಿಸುತ್ತದೆ. ನಾವು ಅವರಿಗೆ ಸಹಾಯ ಮಾಡಲಿದ್ದೇವೆ” ಎಂದರು. ಅಮೆರಿಕದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ ಕಾರಣ ಒಂದು ವಿಮಾನದಲ್ಲಿ ನ್ಯೂಯಾರ್ಕ್ ಗೆ ವೈದ್ಯಕೀಯ ಪರಿಕರಗಳನ್ನು ರಷ್ಯಾ ಕಳುಹಿಸಿಕೊಟ್ಟಿತ್ತು.ಅಮೆರಿಕದಲ್ಲಿ ಶೀಘ್ರದಲ್ಲೇ ಅಗತ್ಯಕ್ಕಿಂತ ಹೆಚ್ಚಿನ ವೆಂಟಿಲೇಟರ್ ಗಳಿರಲಿದ್ದು ಇತರ ದೇಶಗಳಿಗೆ ನೀಡಲು ಸಿದ್ಧ ಎಂದು ಅವರು ನುಡಿದರು. ಇಟಲಿ, ಸ್ಪೇನ್, ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳಿಗೆ ಸಹಾಯ ಮಾಡುವುದಾಗಿ ಅವರು ಹೇಳಿದರು.ಅಮೆರಿಕದಲ್ಲಿ ಈವರೆಗಗೆ 6,14,000 ಕ್ಕೂ ಹೆಚ್ಚು ಕೊರೊನಾ ವೈರಾಣು ಸೋಂಕು ಪ್ರಕರಣಗಳು ದಾಖಲಾಗಿದ್ದು 24,490 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.