ಫೆ.13ರಿಂದ ರಾಯಚೋಟಿ ವೀರಭದ್ರ ದೇವರ ಬ್ರಹ್ಮೋತ್ಸವ

ಫೆ.13ರಿಂದ ರಾಯಚೋಟಿ ವೀರಭದ್ರ ದೇವರ ಬ್ರಹ್ಮೋತ್ಸವ Rayachoti Veerabhadra devara Brahmotsava from Feb. 13



ಧಾರವಾಡ 11 : ಭಾರತದಲ್ಲಿ ತ್ರಿನೇತ್ರ ಶಕ್ತಿಯ ಏಕೈಕ ವೀರಭದ್ರದೇವರ ಅವತಾರವೆಂಬ ಖ್ಯಾತಿಗೆ ಭಾಜನವಾಗಿರುವ ಆಂಧ್ರ​‍್ರದೇಶದ ಅನ್ನಮಯ್ಯ ಜಿಲ್ಲೆಯ ರಾಯಚೋಟಿ ಕ್ಷೇತ್ರದ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ 2026ರ ಬ್ರಹ್ಮೋತ್ಸವವು ಫೆ.13 ರಿಂದ 23ರವರೆಗೆ ಜರುಗಲಿದೆ. ಬ್ರಹ್ಮೋತ್ಸವದ ಅಂಗವಾಗಿ 11 ದಿನಗಳ ಕಾಲ ಶ್ರೀಮಹಾಗಣಪತಿ ಪೂಜೆ, ಮಯೂರ, ನಂದಿ, ಗಜ, ಹುಲಿ, ಸಿಂಹ, ಹಂಸ, ಅಶ್ವ ವಾಹನೋತ್ಸವಗಳು, ವಿಶೇಷ ಹೋಮ, ಆಚರಣೆಗಳೂ ಸೇರಿದಂತೆ ಹಲವಾರು ಸನಾತನ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.

ಫೆ.19ರಂದು ಶ್ರೀವೀರಭದ್ರದೇವರಿಗೆ ಮತ್ತು ಶ್ರೀಭದ್ರಕಾಳಿ ಅಮ್ಮನವರಿಗೆ ಚಿನ್ನದ ಕೀರೀಟ ಧಾರಣೆ ನಡೆಯಲಿದೆ.  ಧರ್ಮಜಾಗೃತಿ ಸಮಾವೇಶ : ಫೆ.19 ರಂದು ಸಂಜೆ 6 ಗಂಟೆಗೆ ಕನ್ನಡ ಸಾಂಸ್ಕೃತಿಕ ಸೇವಾ ಸಮಿತಿ ಹಮ್ಮಿಕೊಂಡಿರುವ ಧರ್ಮಜಾಗೃತಿ ಸಮಾವೇಶವನ್ನು ಆಂಧ್ರ​‍್ರದೇಶ ಸಾರಿಗೆ ಮತ್ತು ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದರೆಡ್ಡಿ ಉದ್ಘಾಟಿಸುವರು. ವಿಜಯಪೂರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರ್ಗಿ ಅಧ್ಯಕ್ಷತೆವಹಿಸುವರು.  

ಮಹಾರಥೋತ್ಸವ : ಫೆ.20ರಂದು ಸಾಯಂಕಾಲ 4-30 ಗಂಟೆಗೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ ವಾರ್ಷಿಕ ಮಹಾರಥೋತ್ಸವವು ಜರುಗಲಿದೆ. ಇದೇ ದಿನ ಪ್ರಾತಃಕಾಲ 4 ಗಂಟೆಗೆ ಅಗ್ನಿಕುಂಡ ಪ್ರವೇಶ, ಮುಂಜಾನೆ 11.45ರ ಶುಭ ಮುಹೂರ್ತದಲ್ಲಿ ಶ್ರೀವೀರಭದ್ರದೇವರಿಗೆ ವಜ್ರದ ತ್ರಿನೇತ್ರ ಧಾರಣೆ ಹಾಗೂ ಮಹಾನೈವೇದ್ಯ ನಡೆಯಲಿದೆ. ಬ್ರಹ್ಮೋತ್ಸವದ 11 ದಿನಗಳ ಅವಧಿಯಲ್ಲಿ ನಿತ್ಯವೂ ನಿರಂತರ ದಾಸೋಹ ನಡೆಯುವುದು. 

ಹುಬ್ಬಳ್ಳಿ ಭಕ್ತರ ರಥ : ಹುಬ್ಬಳ್ಳಿ ನಗರದ ಭಕ್ತರಾದ ಗೀರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಪಿ.ಎಂ.ಚಿಕ್ಕಮಠ, ಪ್ರಕಾಶ ಅಂದಾನಿಮಠ, ರಾಚಯ್ಯ ಮಠಪತಿ, ಎಂ.ಐ. ದೇಶನೂರ, ಅನಿಲ ಉಳ್ಳಾಗಡ್ಡಿ, ಉದಯ ಅಂದಾನಿಮಠ, ಭರತ ತೊಗ್ಗಿ, ಗಂಗಾಧರ ಹಿರೇಮಠ, ಮಹೇಶ ಸೂಡಿ, ರಾಜಶೇಖರ ಕರವೀರಮಠ, ರಮೇಶಕುಮಾರ ಬುಡರಕಟ್ಟಿಮಠ ಮುಂತಾದವರ ಸತತ ಸಂಘಟಿತ ಪ್ರಯತ್ನದ ಫಲವಾಗಿ ಉತ್ತರಕರ್ನಾಟಕ ಭಾಗದ ಸಾವಿರಾರು ಭಕ್ತರು ಭಕ್ತಿ ಕಾಣಿಕೆ ನೀಡಿ ಈಗ್ಗೆ 16 ವರ್ಷಗಳ ಹಿಂದೆಯೇ ಸುಮಾರು 10 ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನೂತನ ರಥವನ್ನು ನಿರ್ಮಾಣ ಮಾಡಿಸಿ ಪ್ರತೀ ವರ್ಷ ರಥೋತ್ಸವ ನಡೆಯಲು ಕಾರಣರಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ​‍್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವರೆಂದು ಪ್ರಚಾರ ಸಮಿತಿ ಸಂಚಾಲಕ ಗುರುಮೂರ್ತಿ ಯರಗಂಬಳಿಮಠ ಅಮ್ಮಿನಬಾವಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.