ಪಡಿತರ ಚೀಟಿ ಸದಸ್ಯರು ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ

ಪಡಿತರ ಚೀಟಿ ಸದಸ್ಯರು ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ  Ration card members, get your e-KYC done for free

ಲೋಕದರ್ಶನ ವರದಿ 

  ಕಾರವಾರ 29: ಉತ್ತರ ಕನ್ನಡ ಜಿಲ್ಲೆಯಲ್ಲಿ 5,69,044 ಪಡಿತರ ಚೀಟಿ ಸದಸ್ಯರು ಐದು ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿದ್ದು, ಇಂತಹ ಸದಸ್ಯರು ಪುನಃ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ತಿಳಿಸಿದ್ದಾರೆ. ಸೆ.27, 2026ರ ವೇಳೆಗೆ ಜಿಲ್ಲೆಯಲ್ಲಿ 2,44,930 ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಂಡಿದ್ದು, ಇನ್ನೂ 3,24,114 ಫಲಾನುಭವಿಗಳ ಇ-ಕೆವೈಸಿ ಬಾಕಿ ಇದೆ. ಇ-ಕೆವೈಸಿ ಮಾಡಿಸಿಕೊಳ್ಳಲು ಸೆ.30 ಕೊನೆಯ ದಿನಾಂಕವಾಗಿದ್ದರೂ, ಸರ್ಕಾರವು ಅವಧಿಯನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿದೆ. ಫಲಾನುಭವಿಗಳು ಕೊನೆಯ ದಿನಾಂಕದವರೆಗೆ ಕಾಯದೆ,

ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಉಚಿತವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಇ-ಕೆವೈಸಿ ಮಾಡಿಸಿಕೊಳ್ಳದಿದ್ದಲ್ಲಿ ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರದಿಂದ ಪಡೆಯುತ್ತಿರುವ ವಿವಿಧ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಗೆ ಹಣ ಪಡೆದರೆ ಆಹಾರ ಇಲಾಖೆ ಗ್ರಾಹಕರ ಸಹಾಯವಾಣಿ 1967 ಅಥವಾ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ್ ಹಾಗೂ ಆಹಾರ ನೀರೀಕ್ಷಕರಿಗೆ ದೂರು ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.