ಹಳೇ ವೈಷಮ್ಯ: ವ್ಯಕ್ತಿಯ ಅಪಹರಣ, ಕೊಲೆ: ನಾಲ್ವರು ಆರೋಪಿಗಳ ಬಂಧನ

ಹಳೇ ವೈಷಮ್ಯ: ವ್ಯಕ್ತಿಯ ಅಪಹರಣ, ಕೊಲೆ: ನಾಲ್ವರು ಆರೋಪಿಗಳ ಬಂಧನ Old enmity: Abduction and murder of a man; four accused arrested.

ಬೆಳಗಾವಿ : ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಿರುವ ಪ್ರಕರಣವನ್ನು ಮಾಳಮಾರುತಿ ಠಾಣೆ ಪೊಲೀಸರು ಭೇದಿಸಿದ್ದು, ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಪ್ರಕರಣದಲ್ಲಿ ಶಶಿ ಸಂಜಯ ಜಾಲಗಾರ (33),(ಕಪಿಲೇಶ್ವರ ಮಂದಿರದ ಹಿಂದೆ, ಬೆಳಗಾವಿ), ರಾಹುಲ ಸಂಜಯ ಜಾಲಗಾರ (30), (ಕಪಿಲೇಶ್ವರ ಮಂದಿರದ ಹಿಂದೆ, ಬೆಳಗಾವಿ), ದಶರಥ ರಾಜ ರಜಪೂತ (23), (ಮಾರುತಿ ಮಂದಿರದ ಹಿಂದೆ, ಕಪಿಲೇಶ್ವರ ಮಂದಿರದ ಹತ್ತಿರ, ಬೆಳಗಾವಿ), ಅರುಣ ಲಕ್ಷ್ಮಣ ಹುಲ್ಲೋಳ (22), (ವಿನಾಯಕ ನಗರ, ಪೀರಣವಾಡಿ, ಬೆಳಗಾವಿ) ಇವರು ಬಂಧಿತ ಆರೋಪಿತರಾಗಿದ್ದಾರೆ.

    ಬೆಳಗಾವಿಯ ಅಭಿಜೀತ ಪ್ರಭಾಕರ ಕಂಗ್ರಾಳಕರ ಅವರು, ತಮ್ಮ ಪುತ್ರ ಸರ್ವೇಶ ಅವರು ಸೆ.20ರಂದು ರಾತ್ರಿ ಗಣೇಶ ದರ್ಶನಕ್ಕೆ ತೆರಳಿದ್ದು, ಬಳಿಕ ಮನೆಗೆ ಮರಳಿಲ್ಲ ಎಂದು ಸೆ.25ರಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು **ಪ್ರಕರಣ ಸಂಖ್ಯೆ 202/2026ರಡಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

 ತನಿಖೆ ವೇಳೆ ಖಾನಾಪುರ ತಾಲೂಕಿನಲ್ಲಿ ಮಲಪ್ರಭಾ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಳಮಾರುತಿ ಠಾಣೆಯ ಪಿಐ ಬಿ.ಆರ್.ಗಡ್ಡೆಕರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಪತ್ತೆಯಾದ ಶವವು ನಾಪತ್ತೆಯಾಗಿದ್ದ ಸರ್ವೇಶ ಅವರದ್ದೇ ಎಂಬುದು ಪ್ರಾಥಮಿಕವಾಗಿ ದೃಢಪಟ್ಟಿತು.

    ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ಸಂಖ್ಯೆ 206/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 103(1), 238 ಹಾಗೂ 3(5)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಯಿತು.

ಹಳೇ ವೈಷಮ್ಯವೇ ಕೊಲೆಗೆ ಕಾರಣ? :

    ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಲ್ಲಿ ಮೃತ ಸರ್ವೇಶ ಹಾಗೂ ಆರೋಪಿ ಶಶಿ ಸಂಜಯ ಜಾಲಗಾರ ನಡುವೆ ಕೃಷಿ ಜಮೀನಿನಲ್ಲಿ ಶೆಡ್ ನಿರ್ಮಿಸುವ ವಿಚಾರವಾಗಿ ತಕರಾರು ನಡೆದಿತ್ತು. ಈ ಸಂದರ್ಭದಲ್ಲಿ ಸರ್ವೇಶ ಅವರು ಶಶಿ ಜಾಲಗಾರನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದರೆನ್ನಲಾಗಿದ್ದು, ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 57/2025ರಡಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

   ಈ ಘಟನೆಯ ಹಿನ್ನೆಲೆಯಲ್ಲಿ ಶಶಿ ಜಾಲಗಾರ ಸರ್ವೇಶ ಅವರ ಮೇಲೆ ಹಗೆ ಬೆಳೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಸರ್ವೇಶ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿ, ಇತರ ಮೂವರು ಆರೋಪಿಗಳೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸರ್ವೇಶ ಅವರ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ, ಖಾನಾಪುರ ತಾಲೂಕಿನ ಕೊಕನವಾಡ ಗ್ರಾಮದ ವ್ಯಾಪ್ತಿಯ ಖಾನಾಪುರ–ಜಾಂಬೋಟಿ ರಸ್ತೆಯ ಬಳಿಯ ಮಲಪ್ರಭಾ ನದಿಯ ಬ್ರಿಡ್ಜ್‌ ಮೇಲಿನಿಂದ ನದಿಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ಒಟ್ಟು ನಾಲ್ವರು ಆರೋಪಿಗಳನ್ನು ಸೆ.28ರಂದು ಪತ್ತೆಹಚ್ಚಿ ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.

     ಈ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾಳಮಾರುತಿ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ನಿಕಂ ಪ್ರಕಾಶ ಅಮ್ರಿತ ಮತ್ತು ಡಿಸಿಪಿ ನಾರಾಯಣ ಭರಮನಿ, ಶ್ರೀಧರ್ ಅವರು ಶ್ಲಾಘಿಸಿದ್ದಾರೆ.