ಜೈಲು ಕಾವಲುಗಾರರಿಂದ ಕೈದಿಯ ಪತ್ನಿಯ ಮೇಲೆ ಅತ್ಯಾಚಾರ

 ರಾಜ್ಗರ್, ಮಧ್ಯಪ್ರದೇಶ, ನ.7:     ಜೈಲಿನಲ್ಲಿದ್ದ ಗಂಡನನ್ನು ನೋಡಲು ಬರುತ್ತಿದ್ದ ಪತ್ನಿಯನ್ನು ಜೈಲಿನ ಸಿಬ್ಬಂದಿಯೇ ಅಪಹರಿಸಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಇಲ್ಲಿ ನಡೆದಿದೆ. ದೇಶದಲ್ಲಿ ಸಂಕಷ್ಟಕ್ಕೊಳಗಾದವರನ್ನು, ನ್ಯಾಯ ಕೇಳಿ ಮತ್ತೆ ಮತ್ತೆ ಸಂಕಷ್ಟಕ್ಕೆ ದೂಡುತ್ತಿರುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಹೊಸ ಸೇರ್ಪಡೆಯಾಗಿದೆ. ಸಂತ್ರಸ್ತ ಮಹಿಳೆಯ ಪತಿಯನ್ನು ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ಸಾರಂಗ್ಪುರ ಉಪ ಜೈಲಿನಲ್ಲಿ ಬಂಧಿಸಲಾಗಿದೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.  ಸಂತ್ರಸ್ತೆ - ಸಾರಂಗ್ಪುರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಶಾಜಾಪುರ ಜಿಲ್ಲೆಯ ಖೇಡಾವಾಡ್ ಗ್ರಾಮದ ನಿವಾಸಿ . ಆಗಾಗ  ತನ್ನ ಗಂಡನನ್ನು ಭೇಟಿ ಮಾಡಲು ಅವರು ಜೈಲಿಗೆ ಬಂದು ಹೋಗುತ್ತಿದ್ದರು. ಜೈಲಿನ ಕಾವಲುಗಾರರಾದ ಹರಿರಾಮ್ ಮತ್ತು ಎಂ.ಎಸ್.ರಘುವಂಶಿ ಎಂಬವರು ಮಹಿಳೆ ಜೈಲಿಗೆ ಬಂದಾಗ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದರು. ಶುಕ್ರವಾರ ಅವರು ಮಹಿಳೆಗೆ ಕರೆ ಮಾಡಿ, ನಿಮ್ಮ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ, ತಕ್ಷಣ ಸಾರಂಗ್ಪುರದ ಆಸ್ಪತ್ರೆಗೆ ಬರಬೇಕು ಎಂದು ಸೂಚಿಸಿದ್ದಾರೆ.   ಮಹಿಳೆ ಅಲ್ಲಿಗೆ ಬಂದಾಗ ಆಕೆಯನ್ನು ಕಿಥೋರ್ ಗ್ರಾಮಕ್ಕೆ ಕರೆದೊಯ್ದು, ಅಲ್ಲಿ ಕಾವಲುಗಾರರಾದ ರಾಮಚಂದ್ರ ಮತ್ತು ಸಾಗರ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದೀಗ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಅವರ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.