ಕಾಸರಗೋಡು ಅಬಲೆ ಮೇಲೆ ಅತ್ಯಾಚಾರ. ಮತಾಂತರಕ್ಕೆ ಬಲವಂತ ಪ್ರಕರಣ: ಸಿಐಡಿ ತನಿಖೆಗೆ ಶೋಭಾ ಕರಂದ್ಲಾಜೆ ಮನವಿ

ಬೆಂಗಳೂರು, ಜ13(ಯುಎನ್‍ಐ)- ಅತ್ಯಾಚಾರ ಮತ್ತು ಮತಾಂತರ ಬಲವಂತಕ್ಕೆ ಒಳಗಾದ ಕಾಸರಗೋಡಿನ ಸಂತ್ರಸ್ತೆಗೆ ನ್ಯಾಯ ದೊರೆಯುವಂತಾಗಾಲು ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೋಮವಾರ ಡಿಜಿಪಿ ನೀಲಮಣಿ ರಾಜು ಹಾಗೂ ಡಿಐಜಿ(ಸಿಐಡಿ) ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ 

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕಾಸರಗೋಡು ಜಿಲ್ಲೆಯ 18 ವರ್ಷದ ಅಬಲೆಗೆ ಯುವಕರಿಬ್ಬರು ಮತ್ತುಬರಿಸುವ ಪದಾರ್ಥ ನೀಡಿ, ಅತ್ಯಾಚಾರವೆಸಗಿದ್ದಾರೆ. ಇದನ್ನು ವಿಡಿಯೋನಲ್ಲಿ ಸೆರೆ ಹಿಡಿದು ಮತಾಂತರಕ್ಕೆ ಬೆದರಿಸಿದ್ದಾರೆ. ಈ ಕುರಿತಂತೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ಥೆಯೊಂದಿಗೆ ತಾವು ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸಂತ್ರಸ್ಥೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಯುವಕರು ಸಂತ್ರಸ್ತೆಯನ್ನು ಮಂಗಳೂರು, ಬೆಂಗಳೂರು ಮುಂತಾದೆಡೆ ಕರೆದೊಯ್ದಿರುವುದರಿಂದ  ಇದು ಬೆಂಗಳೂರಿಗೆ ಮಾತ್ರ ಸೀಮಿತವಾದ ಪ್ರಕರಣವಲ್ಲ. ಸಂತ್ರಸ್ತೆಯನ್ನು ಬ್ಲಾಕ್‍ಮೇಲ್ ಮಾಡಿ ಇಡೀ ಕುಟುಂಬವನ್ನು ಮತಾಂತರಕ್ಕೆ ಒತ್ತಾಯಿಸಿದ್ದಾರೆ. ಇಸ್ಲಾಂಗೆ ಮತಾಂತರವಾಗದಿದ್ದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಿದರು. 

ಈ ಪ್ರಕರಣ ಒಬ್ಬರಿಗೆ ಸಂಬಂಧಿಸಿದ್ದಲ್ಲ. ಪ್ರಕರಣವನ್ನು ಬೇರೆ, ಬೇರೆ ಆಯಾಮಗಳಿಂದ ನೋಡಬೇಕಾಗಿದೆ. ಏಕೆಂದರೆ, ರಾಜ್ಯದಲ್ಲಿ ಭಯೋತ್ಪಾದಕರು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಚಾಮರಾಜನಗರ, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಭಯೋತ್ಪಾದಕರ ಜಾಲವಿದೆ. ಇಸ್ಲಾಂಗೆ ಮತಾಂತರಗೊಳಿಸುವ ಗ್ಯಾಂಗ್ ಕೆಲಸ ಮಾಡುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ಯುವಕರು ಬೆಂಗಳೂರಿನಲ್ಲಿ  ಏನು ಮಾಡುತ್ತಿದ್ದರು? ಯಾವ ಅಕ್ರಮಗಳಲ್ಲಿ ಭಾಗಿಯಾಗಿದ್ದರು? ಎಂಬುದರ ಬಗ್ಗೆ ತನಿಖೆಯಾಗಬೇಕಿದೆ. ಈ ಎಲ್ಲದರ ಬಗ್ಗೆ ಬೆಂಗಳೂರು ಪೊಲೀಸರಿಂದ ಮಾತ್ರ ತನಿಖೆ ಸಾಧ್ಯವಿಲ್ಲ. ಪ್ರಕರಣವನ್ನು ಸಿಐಡಿನಿಂದ ನಡೆಸುವುದೇ ಸೂಕ್ತ ಎಂದು ಶೋಭಾ ಕರಂದ್ಲಾಜೆ ಹೇಳಿದರು.