ಶಿಕ್ಷಕರನ್ನು ಗೌರವಿಸುವುದು ಭಾರತೀಯ ಪರಂಪರೆ ನಮಗೆ ನೀಡಿದ ಬಳುವಳಿ: ಬಸವರಾಜ ಕೌಲಗಿ

ಶಿಕ್ಷಕರನ್ನು ಗೌರವಿಸುವುದು ಭಾರತೀಯ ಪರಂಪರೆ ನಮಗೆ ನೀಡಿದ ಬಳುವಳಿ: ಬಸವರಾಜ ಕೌಲಗಿ Rank-winning student Prajwal pays Felicitation to the teacher who taught him

ಕಲಿಸಿದ ಶಿಕ್ಷಕರನ್ನು ಗೌರವಿಸಿದ ರ‍್ಯಾಂಕ್ ವಿದ್ಯಾರ್ಥಿ ಪ್ರಜ್ವಲ್ 

ವಿಜಯಪುರ 30: ಒಬ್ಬ ವಿದ್ಯಾರ್ಥಿ ಉತ್ತಮ ಅಂಕಗಳನ್ನು ಪಡೆದಾಗ ಅವನ ಯಶಸ್ಸಿನಲ್ಲಿ ಪಾಲು ಪಡೆದುಕೊಳ್ಳುವುದಕ್ಕೆ ಬಹಳಷ್ಟು ಜನ ಬರುತ್ತಾರೆ. ಆದರೆ ಅದೇ ವಿದ್ಯಾರ್ಥಿ ಕಡಿಮೆ ಅಂಕ ಪಡೆದರೆ ಶಿಕ್ಷಕರನ್ನು ದೂರುತ್ತಾರೆ. ಈ ರೀತಿಯ ಜನಗಳ ಮಧ್ಯದಲ್ಲಿ ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಶ್ರಮ ಇರುತ್ತದೆ ಎನ್ನುವುದನ್ನು ಅರಿತುಕೊಂಡು ಅವರನ್ನು ಅಭಿಮಾನ ಗೌರವದಿಂದ ಸತ್ಕರಿಸುವ ಜನಗಳು ಬಹಳ ವಿರಳ. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನನ್ನ ಮಗ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾನೆ ಎಂದರೆ ಅದರ ಹಿಂದಿರುವ ಪ್ರೇರಕ ಶಕ್ತಿ ಕಲಿಸಿದ ಗುರುಗಳು. ಅವರನ್ನು ಸತ್ಕರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಾಲೆಗೆ ಬಂದು ಶಿಕ್ಷಕರಿಗೆ ಸನ್ಮಾಸಿನಿಸಿದ್ದು ನಿಜಕ್ಕೂ ಹೃದಯ ಸ್ಪರ್ಷಿಯಾಗಿದೆ. ಈ ಸಂಸ್ಕಾರವನ್ನು ಭಾರತೀಯ ಪರಂಪರೆ ನಮಗೆ ಬಳುವಳಿಯಾಗಿ ನೀಡಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು. 

ಶನಿವಾರ ಆದರ್ಶನಗರದ ಎಕ್ಸಲಂಟ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ, ಪ್ರಜ್ವಲ್ ಪತ್ತಾರ ನ ಪಾಲಕರು ಆಯೋಜನೆ ಮಾಡಿದ್ದ ಗುರುನಮನ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು; ಪ್ರಜ್ವಲ್ ಪತ್ತಾರ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ಕೇವಲ ನಮ್ಮ ಸಂಸ್ಥೆಗೆ ಮಾತ್ರವಲ್ಲ ಇಡೀ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. ಇವನ ಈ ಸಾಧನೆಯ ಹಿಂದೆ ಶಿಕ್ಷಕರ ಶ್ರಮವಿದೆ. ಅದನ್ನು ಗುರುತಿಸಿ ಗೌರವ ವಂದನೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಶಿಕ್ಷಕರನ್ನು ಗೌರವಿಸುವ ಸತ್ಪರಂಪರೆ ನಮ್ಮೆಲ್ಲರ ಗೌರವವನ್ನು ಹೆಚ್ಚಿಸುತ್ತದೆ. ಜ್ಞಾನದೊಂದಿಗೆ ಉತ್ತಮ ಸಂಸ್ಕಾರ ಬೆರೆತಾಗ ಅದು ಅಪ್ರತಿಮ ಸಾಧನೆಗೆ ಕಾರಣವಾಗುತ್ತದೆ. ಶಿಕ್ಷಕರ ಆಸ್ತಿಯೆಂದರೆ ಶ್ರೇಷ್ಠ ಸಾಧನೆ ಮಾಡುವ ಮಕ್ಕಳು. ಪ್ರತಿ ಉತ್ಕೃಷ್ಟ ಸಾಧನೆಯ ನಂತರ ಶಿಕ್ಷಕರ ಜವಾಬ್ದಾರಿ ಹೆಚ್ಚುತ್ತದೆ. ಇಂದು ಪ್ರಜ್ವಲ್ ಮಾಡಿದ ಸಾಧನೆಯನ್ನು ಮೀರಿ ಇನ್ನೂ ಹೆಚ್ಚನ ಸಾಧನೆ ಮಾಡುವಂತೆ ಮುಂದಿನ ಮಕ್ಕಳನ್ನು ತಯಾರು ಮಾಡುವಂತ ಗುರುತರವಾದ ಜವಾಬ್ದಾರಿಯ ಭಾರವನ್ನು ಶಿಕ್ಷಕರ ಹೆಗಲ ಮೇಲೆ ಹೊರಿಸುತ್ತವೆ. ಹೀಗಾಗಿ ಇಂದು ಸನ್ಮಾನ ಸ್ವೀಕರಿಸಿದ ಪ್ರತಿಯೊಬ್ಬ ಶಿಕ್ಷಕರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯ ಕಡೆಗೆ ಮಕ್ಕಳನ್ನು ತಯಾರಿಸುವುದಕ್ಕೆ ಸಿದ್ಧವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಪ್ರಜ್ವಲ್ ಪತ್ತಾರ ತಂದೆ ರಾಜಶೇಖರ ಪತ್ತಾರ; ಎಕ್ಸಲಂಟ್ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಕೇವಲ ಪಠ್ಯ ಬೋದನೆಯನ್ನು ಮಾತ್ರ ಮಾಡುವುದಿಲ್ಲ. ಬದಲಿಗೆ ಅವರ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಪ್ರೋತ್ಸಾಹ ನೀಡುತ್ತಾರೆ. ಇದು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಕ್ಕೆ ತರುವುದಕ್ಕೆ ನೆರವಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿಂದ ಪಾಲಕರು ಉತ್ತಮ ಫಲಿತಾಂಶಗಳನ್ನು ನೀರೀಕ್ಷಿಸಬಹುದಾಗಿದೆ. ಅದರಿಂದಾಗಿಯೇ ಇಂದು ನಮ್ಮ ಮಗ ಈ ಮಟ್ಟದಲ್ಲಿ ಫಲಿತಾಂಶ ಪಡೆದುಕೊಳ್ಳುವುದಕ್ಕೆ ನೆರವಾಯಿತು ಎಂದು ಹೇಳಿದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಎಕ್ಸಲಂಟ ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ; ಎಕ್ಸಲಂಟ ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸ್ಥಾಪಿತವಾಗಿದೆ. ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ದಾಖಲೆ ಮಟ್ಟದ ಫಲಿತಾಂಶವನ್ನು ತಂದುಕೊಟ್ಟಿರುತ್ತಾರೆ. ಈ ವರ್ಷವಂತೂ ಎಲ್ಲ ವಿಭಾಗಗಳಲ್ಲೂ ರಾ​‍್ಯಂಕ್‌ಗಳ ಸುರಿಮಳೆಯೇ ಆಗಿದೆ. ಅದರಲ್ಲೂ ಎಕ್ಸಲಂಟ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಓದಿ ಪ್ರಜ್ವಲ ಪತ್ತಾರ, ರಾಜ್ಯಕ್ಕೆ ಎರಡನೇಯ ರಾ​‍್ಯಂಕ್ ತಂದು ಕೊಡುವ ಮೂಲಕ ಉತ್ತಮ ಸಾಧನೆ ಮಾಡಿರುತ್ತಾನೆ. ಇವನ ಈ ಸಾಧನೆ ಪ್ರಸ್ತುತ ಕಲಿಯುತ್ತಿರುವ ಎಲ್ಲ ಮಕ್ಕಳಿಗೂ ಮಾದರಿಯಾಗಿದೆ. ವಿದ್ಯಾರ್ಥಿಯ ಈ ಸಾಧನೆಗೆ ಕಾರಣರಾದ ಎಲ್ಲರೂ ಅಭಿನಂದನೆಗೆ ಅರ್ಹರು ಎಂದರು.  

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ   ಎಂ. ಐ. ಬಿರಾದಾರ, ರಾಜೇಶ್ವರಿ ಪತ್ತಾರ, ಕುಮಾರ. ಪ್ರಜ್ವಲ. ಪತ್ತಾರ, ಪಿ. ಬಿ. ಖೇಡಗಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಶಿಕ್ಷಕರನ್ನು ಸನ್ಮಾನಿಸಲಾಯಿತು.