ಮಾನವಕುಲದ ಒಳಿತಿಗಾಗಿ ರಂಜಾನ್ ಆಚರಣೆ: ಖಾದ್ರಿ

ಮಾನವಕುಲದ ಒಳಿತಿಗಾಗಿ ರಂಜಾನ್ ಆಚರಣೆ: ಖಾದ್ರಿ Ramadan is celebrated for the good of humanity: Qadri

 ಲೋಕದರ್ಶನ ವರದಿ 

ಶಿಗ್ಗಾವಿ 22:  ಪವಿತ್ರ ರಂಜಾನ್ ಹಬ್ಬ ಇದು ಕೇವಲ ಉಪವಾಸವಲ್ಲದೆ, ಕೆಟ್ಟ ಆಲೋಚನೆಗಳಿಂದ ದೂರವಿದ್ದು, ಬಡವರಿಗೆ ದಾನ ಮಾಡುವುದು ಮತ್ತು ಪ್ರಾರ್ಥನೆ ಸಲ್ಲಿಸುವುದು ಮುಖ್ಯವಾಗಿದೆ ಎಂದು ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಎಸ್ ಖಾದ್ರಿ ಹೇಳಿದರು. ತಾಲೂಕಿನ ಹುಲಗೂರ ಗ್ರಾಮದ ನಿವಾಸದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿ ನಂತರ ವಿವಿಧ ಮುಖಂಡರಿಂದ ಸನ್ಮಾನಗೊಂಡು ಮಾತನಾಡಿದ ಅವರು. ಮಾನವಕುಲದ ಒಳಿತಿಗಾಗಿ ಸರ್ವರೂ ಪ್ರಾರ್ಥಿಸುವುದು ಅತ್ಯಂತ ಅವಶ್ಯ. ಮಾನವೀಯತೆಯಿಂದ ಪರಸ್ಪರ ಪ್ರೀತಿ-ವಿಶ್ವಾಸದಿಂದ ಬಾಳುವುದು ಮುಖ್ಯ. ಭಾರತ ದೇಶ ಜಾತಿ ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವ ಧರ್ಮವೂ ದ್ವೇಷ ಬೋಧಿಸುವುದಿಲ್ಲ.

ಎಲ್ಲ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆ. ಇದನ್ನು ಅರಿತುಬಾಳಿದರೆ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲು ಸಾಧ್ಯ ಎಂದರು. ದಲಿತ ಮುಖಂಡ ಡಿ.ಎಸ್‌. ಮಾಳಗಿ ಸನ್ಮಾನಿಸಿ ಮಾತನಾಡಿ, ಹಜರೇಷಾ ಖಾದ್ರಿ ದರ್ಗಾಕ್ಕೆ ಅದರದೇ ಆದ ಇತಿಹಾಸವಿದೆ. ಆ ವಂಶಸ್ಥರಾದ ಅಜ್ಜಂಪೀರ್ ಖಾದ್ರಿಯವರು ಸರ್ವ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ರಂಜಾನ್ ತಿಂಗಳು ಸಹಾನುಭೂತಿ, ಶಾಂತಿ ಮತ್ತು ಶಿಸ್ತನ್ನು ಬೋಧಿಸುತ್ತದೆ ಎಂದರು.  ಈ ಸಂದರ್ಭದಲ್ಲಿ ಕರಿಯಪ್ಪ ಕಟ್ಟಿಮನಿ, ಮಹದೇವಪ್ಪ ವಡ್ಡರ, ಮಂಜುನಾಥ ಮಣ್ಣಣ್ಣವರ, ರವಿ ಕೋಣಪ್ಪನವರ, ರಾಮನಗೌಡ ಪಾಟೀಲ, ಸುರೇಶ ಹರಿಜನ, ಅಣ್ಣಪ್ಪ ನಡಟ್ಟಿ, ಬಿರೇಶ ಜಟ್ಟೆಪ್ಪನವರ ಸೇರಿದಂತೆ ವಿವಿಧ ಮುಖಂಡರು ಇದ್ದರು.