ಮರಾಠಾ ಮಂಡಳ ಅಧ್ಯಕ್ಷೆಗೆ ರಾಜ್ಯೋತ್ಸವ ಪ್ರಶಸ್ತಿ ಖಂಡನೀಯ: ಅಶೋಕ ಚಂದರಗಿ
Rajyotsava award for Maratha Mandal president is condemnable: Ashok Chandragi...
ಬೆಳಗಾವಿ 31: ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿರುವದು ಅತ್ಯಂತ ಖಂಡನಿಯವಾಗಿದೆ. ಗಡಿಭಾಗದಲ್ಲಿ ವ್ಯಾಪಕ ಅಕ್ರೋಶ, ಅಸಮಾಧಾನ ವ್ಯಕ್ತವಾಗುತ್ತಿದೆ. ಕರ್ನಾಟಕ ಸರಕಾರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದು ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಕಿಡಿಕಾರಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದರಗಿ ಅವರು ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯು ಕನ್ನಡ ನಾಡು, ನುಡಿ, ಗಡಿಯ ಸಂಬಂಧ ಯಾವಗಲೂ ನಕಾರಾತ್ಮಕ ನಿಲುವು ತಳೆಯುತ್ತ ಬಂದಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಧಿಕ್ಕರಿಸುತ್ತಲೇ ಬಂದಿದೆ. ಸಂಸ್ಥೆಯ ಒಂದೂ ನಾಮ ಫಲಕಗಳಲ್ಲಿ ಕನ್ನಡವು ಕಾಣುವುದಿಲ್ಲ ಎಂದು ಆರೋಪಿಸಿದರು.
ರಾಜಶ್ರೀ ಅವರು ಕೂಡ ಕನ್ನಡದ ಕೆಲಸ ಮಾಡಿಯೇ ಇಲ್ಲ. ವಿಧಾನ ಪರಿಷತ್ತ ಸದಸ್ಯ ನಾಗರಾಜ ಯಾದವ ಅವರ ಪತ್ನಿ ಎಂಬ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿದೆಯೆಂಬ ಭಾವನೆ ಉಂಟಾಗಿದ್ದು ಸರಕಾರಕ್ಕೆ ಇದೊಂದು ದೊಡ್ಡ ಕಳಂಕ ತಂದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ರಾಜ್ಯೋತ್ಸವ ಪ್ರಶಸ್ತಿಯನ್ನು 60 ವರ್ಷ ವಯಸ್ಸಿಗಿಂತ ಮೇಲಿನವರಿಗೆ ಕೊಡಬೇಕೆಂಬ ನಿಯಮವನ್ನು ಸಹ ರಾಜಶ್ರೀಯವರ ವಿಷಯದಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆದ್ದರಿಂದ ರಾಜಶ್ರೀ ಅವರಿಗೆ ನೀಡಲು ಉದ್ದೇಶಿಸಿರುವ ಪ್ರಶಸ್ತಿಯನ್ನು ಸರಕಾರದ ಮಾನ, ಮರ್ಯಾದೆ, ಗೌರವದ ದೃಷ್ಟಿಯಿಂದ ತತಕ್ಷಣ ತಡೆಹಿಡಿಯಬೇಕೆಂದು ಅವರು ಆಗ್ರಹಿಸಿದರು.
ಬೆಳಗಾವಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾದ ಅನೇಕ ಗಣ್ಯ ಮಾನ್ಯರಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಪತ್ರಿಕೋದ್ಯಮ ಹಾಗೂ ಕನ್ನಡ ಹೋರಾಟಗಳಲ್ಲಿ ಅನೇಕ ಮಹನೀಯರಿದ್ದಾರೆ. ಬಿ.ಎಸ್.ಗವಿಮಠ(80) ಬಸವರಾಜ ಜಗಜಂಪಿ(78) ಎಲ್‌ಎಸ್‌ಶಾಸ್ತ್ರಿ (82) ವರ್ಷ ವಯಸ್ಸಿನವರಾಗಿದ್ದು, ಸಾಹಿತ್ಯ, ರಂಗಭೂಮಿ, ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದವರಾಗಿದ್ದಾರೆ. ಎಸ್‌ಎಮ್ ಕುಲಕರ್ಣಿ 83 ವರ್ಷದ ಬೆಳಗಾವಿಯ ಪ್ರತಿಷ್ಠಿತ ಕರ್ನಾಟಕ ಲಾ ಸೋಸಾಯಟಿಯ ಅಧ್ಯಕ್ಷರಾಗಿ ಕನ್ನಡದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಎಚ್.ಬಿ.ಕೋಲಕಾರ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಡಿ.ಎಸ್. ಚೌಗಲಾ ಅಪ್ಪಟ ರಂಗಕರ್ಮಿಯಾಗಿರುವ ಇವರು ಕನಾಟಕವಲ್ಲದೇ ಹೊರರಾಜ್ಯಗಳಲ್ಲೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸದವರಾಗಿದ್ದಾರೆ. ಮಾನವ ಬಂಧುತ್ವ ವೇದಿಕೆ ಈ ಸಂಸ್ಥೆಯು ಜನತೆಯಲ್ಲಿ ಪ್ರಗತಿಪರ ವಿಚಾರಧಾರೆಗಳನ್ನು ಬಿತ್ತುತ್ತಿದ್ದು ಪ್ರೋ. ವೈ.ಬಿ.ಹಿಮ್ಮಡಿಯವರ ನೇತೃತ್ವದಲ್ಲಿ ಜನಪರವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಅವರ ಬಗ್ಗೆ ತಾವು ಸಹಾನುಭೂತಿಯಿಂದ ಪರೀಶೀಲಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಬೇಕು ಎಂದರು.
ರಾಜಶ್ರೀ ನಾಗರಾಜ ಯಾದವ ಅವರ ಬದಲಿಗೆ ಮೇಲಿನ ಒಬ್ಬರಿಗೆ ಪ್ರಶಸ್ತಿಯನ್ನು ಘೋಷಿಸಬೇಕೆಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸದಸ್ಯರು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಗಡಿನಾಡ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಉಪಾಧ್ಯಕ್ಷ ಶಿವಪ್ಪ ಶಮರಂತ, ಕನ್ನಡ ಕ್ರಿಯಾ ಸಮಿತಿ ಉಪಾಧ್ಯಕ್ಷ ಎಮ್.ಜಿ.ಮಕಾನದಾರ, ನೃಪತುಂಗ ಯುವಕ ಮಂಡಳ ಅಧ್ಯಕ್ಷ ರಸಾಗರ ಬೋರಗಲ್, ಬ್ರಹ್ಮದೇವ ಯುವಕ ಮಂಡಳ ಅಧ್ಯಕ್ಷ ರೋಹಿತ ಪದ್ಮನ್ನವರ, ಡಾ. ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಮಲ್ಲಪ್ಪ ಅಕ್ಷರದ, ರಮೇಶ ಸೊಂಟಕ್ಕಿ ಆಗ್ರಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 