ರಾಜ್ಯಸಭಾ ಚುನಾವಣೆ ಮುಂದೂಡಿಕೆ

ನವದೆಹಲಿ,ಮಾ ೨೪, ಕಾಳ್ಗಿಚ್ಚಿನಂತೆ  ವ್ಯಾಪಿಸುತ್ತಿರುವ  ಕೊರೊನಾ  ಸೋಂಕು   ನಿಯಂತ್ರಿಸುವ  ಕ್ರಮವಾಗಿ   ರಾಜಧಾನಿ ದೆಹಲಿ  ಸೇರಿದಂತೆ ದೇಶಾದ್ಯಂತ  ಬಹುತೇಕ ರಾಜ್ಯಗಳಲ್ಲಿ  ಸಂಪೂರ್ಣ ಲಾಕ್ ಡೌನ್  ಘೋಷಿಸಿರುವ  ಹಿನ್ನಲೆಯಲ್ಲಿ ಇದೇ  ೨೬ ರಂದು ನಡೆಯಬೇಕಿದ್ದ ರಾಜ್ಯಸಭಾ ಚುನಾವಣೆಗಳನ್ನು  ಕೇಂದ್ರ  ಚುನಾವಣಾ ಆಯೋಗ ಮುಂದೂಡಲು ನಿರ್ಧರಿಸಿದೆ.  
ಚುನಾವಣಾ ಆಯೋಗ   ಘೋಷಿಸಿದಂತೆ  ಮಾರ್ಚ್ ೨೬ ರಂದು ರಾಜ್ಯಸಭಾ ಚುನಾವಣೆ ನಡೆಯಬೇಕಿತ್ತು. ರಾಷ್ಟ್ರ ರಾಜಧಾನಿ ದೆಹಲಿ ಸೇರಿದ   ದೇಶದ  ಬಹುತೇಕ  ರಾಜ್ಯಗಳಲ್ಲಿ  ಮಾರ್ಚ್ ೩೧ರವರೆಗೆ  ಸಂಪೂರ್ಣ ಲಾಕ್ ಡೌನ್  ಘೋಷಿಸಲಾಗಿದೆ.ಕಾಂಗ್ರೆಸ್   ತೊರೆದು  ಇತ್ತೀಚಿಗೆ   ಬಿಜೆಪಿ  ಸೇರಿದ್ದ  ಮಧ್ಯಪ್ರದೇಶ ಯುವ  ನಾಯಕ ಜ್ಯೋತಿರಾದಿತ್ಯ  ಸಿಂಧಿಯಾ  ಅವರಿಗೆ ಕೇಸರಿ ಪಕ್ಷ  ರಾಜ್ಯಸಭಾ ಚುನಾವಣೆಯ  ಅಭ್ಯರ್ಥಿಯನ್ನಾಗಿಸಿದೆ.
ಸಂಸತ್ತಿನ ಮೇಲ್ಮನೆಯ ೫೫ ಸ್ಥಾನಗಳಿಗೆ   ಮಾರ್ಚ್ ೨೬ ರಂದು ಚುನಾವಣೆ ನಡೆಯಬೇಕಿತ್ತು. ಆದರೆ,   ಈಗಾಗಲೇ ಚುನಾವಣೆಯಿಲ್ಲದೆ  ೩೭ ಅಭ್ಯರ್ಥಿಗಳು  ಅವಿರೋಧವಾಗಿ ಚುನಾಯಿತರಾಗಿದ್ದಾರೆ.ಉಳಿದ ೧೮ ಸ್ಥಾನಗಳಿಗೆ  ಪರಿಸ್ಥಿತಿ  ನೋಡಿಕೊಂಡು ಚುನಾವಣೆ ನಡೆಸಲು   ಚುನಾವಣಾ ಆಯೋಗ ನಿರ್ಧರಿಸಿದೆ. ದೇಶದಲ್ಲಿ ಕೊರೊನಾ ವೈರಸ್  ಪ್ರಕರಣಗಳು  ೫೦೦ಕ್ಕೆ ಏರಿಕೆಯಾಗಿವೆ  ಕೇಂದ್ರ  ಆರೋಗ್ಯ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.ದೇಶದಲ್ಲಿ  ಸೋಂಕು  ಕಾಳ್ಗಿಚ್ಚಿನಂತೆ  ಹಬ್ಬುತ್ತಿರುವ  ಹಿನ್ನಲೆಯಲ್ಲಿ  ದೇಶದ ಬಹುತೇಕ ಪ್ರದೇಶಗಳನ್ನು  ಸರ್ಕಾರ ಲಾಕ್ ಡೌನ್ ಮಾಡಿದ್ದು, ಜನರು ಒಂದಡೆ ಸೇರುವುದನ್ನು ನಿಷೇಧಿಸಿ, ಮಾ ೩೧ರವರೆಗೆ ರಸ್ತೆ, ರೈಲು ಹಾಗೂ ವಿಮಾನ ಸಂಚಾರವನ್ನು  ರದ್ದುಪಡಿಸಿದೆ.