ರಾಜ್ಯಸಭಾ ಚುನಾವಣೆ: ಕೊನೆಗೂ ಸ್ಪರ್ಧೆಯ ಅಖಾಡಕ್ಕಿಳಿದ ಎಚ್‌.ಡಿ.ದೇವೇಗೌಡ; ಖರ್ಗೆ ನಾಮಪತ್ರ ಸಲ್ಲಿಕೆ

ಬೆಂಗಳೂರು, ಜೂ.8,ಇದೇ ತಿಂಗಳ 19ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಕೊನೆಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪರ್ಧೆಯ ಅಖಾಡಕ್ಕಿಳಿದಿದ್ದಾರೆ.ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ನಾಳೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರನ್ನು ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿಸಲಿದೆ.ನಿನ್ನೆ ರಾತ್ರಿ ದೇವೇಗೌಡ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ  ಕರೆ ಮಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು. ನೀವು ಚುನಾವಣೆಯಲ್ಲಿ ಸ್ಪರ್ಧಿಸಿದರೆ,  ಕಾಂಗ್ರೆಸ್ ನಿಮಗೆ ಸಂಪೂರ್ಣ ಬೆಂಬಲ ನೀಡಲಿದೆ, ನೀವು ನಾಮಪತ್ರ ಸಲ್ಲಿಸಿ ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಎಐಸಿಸಿ ನಾಯಕಿ ಭರವಸೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.ಹೀಗಾಗಿ ನಾಳೆ ನಾಮಪತ್ರ ಸಲ್ಲಿಸಲು ಗೌಡರ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದ್ದು, ನಾಳೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಮೂವರ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಟ್ಟಿದ್ದಾರೆ.ಟಿಕೆಟ್ ಗಾಗಿ ಪ್ರಭಾಕರ್ ಕೋರೆ, ಪ್ರಕಾಶ್ ಶೆಟ್ಟಿ ಮತ್ತು ರಮೇಶ್ ಕತ್ತಿ ತೀವ್ರ ಪೈಪೋಟಿ ನಡೆಸಿದ್ದು,  ಈ ಮೂವರ ಹೆಸರು ಕಳಿಸಿದ್ದರೂ ಕೊನೆ ಕ್ಷಣದಲ್ಲಿ ಬೇರೆ ಹೆಸರು ಅಂತಿಮಗೊಂಡರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಈ ಎಲ್ಲಾ ಊಹಾಪೋಹಗಳಿಗೆ ಇಂದು ಸಂಜೆ ತೆರೆಬಿದ್ದು, ಅಂತಿಮ ಕಣದಲ್ಲಿರುವವರ ಹೆಸರು ಪ್ರಕಟಗೊಳ್ಳಲಿದೆ.ಈ ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತದೆ. ಸಭೆಯ ಬಳಿಕ ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಾಗುತ್ತದೆ. ಖರ್ಗೆ ಅವರಿಗೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿರಿಯ ನಾಯಕರಾದ ಪರಮೇಶ್ವರ್‌, ಎಚ್‌.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಕೆ.ಎಚ್. ಮುನಿಯಪ್ಪ, ಹರಿಪ್ರಸಾದ್ ಸೇರಿ ಹಲವರು ಸಾಥ್ ನೀಡಲಿದ್ದಾರೆ. ಆದರೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವಾಗ ಕೇವಲ ಐದು ಮಂದಿ ಮಾತ್ರ ಕಚೇರಿಯ ಒಳಗೆ ಬರುವಂತೆ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೂಚಿಸಿದ್ದಾರೆ.