ಬೆಳಗಾವಿ 14: " ರಂಗಸಂಪದ ತಂಡದ ರಂಗಸಂಕ್ರಮಣ ನಾಟಕೋತ್ಸವದ ಕೊನೆಯ ದಿನವಾದ ಇಂದು ಲೋಕಮಾನ್ಯ ರಂಗಮಂದಿರದಲ್ಲಿ ಧಾರವಾಡದ ಆಟಮಾಟ ತಂಡ ಪ್ರದರ್ಶಿಸಿದ "ನಾ ರಾಜಗುರು" ಎಂಬ ಅಪೂರ್ವ ನಾಟಕದಿಂದಾಗಿ ಬೆಳಗಾವಿಯ ಕಲಾರಸಿಕರ ಸಂಕ್ರಮಣದ ಸಂಭ್ರಮ ಹೆಚ್ಚಾದಂತಾಗಿದೆ" ಎಂದು ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರಿಂದಿಲ್ಲಿ ಹೇಳಿದರು.
ರಂಗಸಂಪದದ ಪರವಾಗಿ ನಾಟಕದ ಕಲಾವಿದರಿಗೆ ಗೌರವ ಸಮರೆ್ಣ ಮಾಡಿ ಮಾತನಾಡಿದ ಶಾಸ್ತ್ರಿಯವರು ಖ್ಯಾತ ಸಂಗೀತ ಕಲಾವಿದರಾಗಿದ್ದ ಪಂ. ಬಸವರಾಜ ರಾಜಗುರು ಅವರ ಪಾತ್ರದಲ್ಲಿ ಅವರ ಮೊಮ್ಮಗ ವಿಶ್ವರಾಜ ಅವರ ಅತ್ಯುತ್ತಮ ಅಭಿನಯ ಮತ್ತು ಹಾಡುಗಾರಿಕೆ ಪ್ರೇಕ್ಷಕರನ್ನು ಮೈಮರೆಸುವಂತೆ ಮಾಡಿತು. ರಾಜಗುರು ಅವರ ವರ್ಣಮಯ ವ್ಯಕ್ತಿತ್ವ ಎಲ್ಲರ ಕಣ್ಣೆದುರು ಬರುವಂತಾಯಿತು. ಬೆಳಗಾವಿಯ ರಂಗಪ್ರಿಯರಿಗೆ ಇಂತಹ ವಿಶಿಷ್ಟ ನಾಟಕಗಳನ್ನು ನೋಡುವ ಸುವರ್ಣಾವಕಾಶ ಒದಗಿಸುತ್ತಿರುವ ರಂಗಸಂಪದ ತಂಡದವರಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಕಡಿಮೆಯೇ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧಾರವಾಡದ "ಆಟಮಾಟ ತಂಡದವರು ಮಹದೇವ ಹಡಪದ ನಿರ್ದೇಶನದಲ್ಲಿ ಪ್ರದರ್ಶಿಸಿದ ಏಕಪಾತ್ರಾಭಿನಯದ " ನಾ ರಾಜಗುರು" ನಾಟಕದ ಕಲಾವಿದ ಶ್ರೀ ವಿಶ್ವರಾಜ ಅವರು ಸುಮಾರು 100 ನಿಮಿಷಗಳ ಕಾಲ ಸುಶ್ರಾವ್ಯ ಹಾಡು ಮತ್ತು ನಿರರ್ಗಳ ಸಂಭಾಷಣೆಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ರಂಗಸಂಕ್ರಮಣದ ಅಂಗವಾಗಿ ನಾಲ್ಕೂ ದಿನ ಏಕಪಾತ್ರಾಭಿನಯವನ್ನೊಳಗೊಂಡ ಉರಿಯ ಉಯ್ಯಾಲೆ, ಡಿಯರ್ ಅಜ್ಜೋ, ಮಧುರ ಮಂಡೋದರಿ ಮತ್ತು ನಾ ರಾಜಗುರು ನಾಟಕಗಳು ಬೆಳಗಾವಿಯ ಕಲಾರಸಿಕರಿಗೆ ಅಪೂರ್ವ ಅನುಭವ ನೀಡಿದವು.
ಭಾರತೀಯ ಜೀವವಿಮಾ ನಿಗಮದಿಂದ ಪ್ರಾಯೋಜಿತವಾದ ಈ ರಂಗ ಸಂಕ್ರಮಣ ನಾಟಕೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು. ರಂಗಸಂಪದದ ಸಂಚಾಲಕರಾದ ಡಾ. ಅರವಿಂದ ಕುಲಕರ್ಣಿ ಮತ್ತು ಅವರ ಬಳಗದವರೂ ನೆರೆದಿದ್ದ ಪ್ರೇಕ್ಷಕ ವರ್ಗದವರ ಅಭಿನಂದನೆಗೆ ಪಾತ್ರವಾಯಿತು.