ಮಕ್ಕಳ ಹಕ್ಕುಗಳ ಪೋಷಣೆ, ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ: ಟಿ. ಶ್ರೀನಿವಾಸ

ಕೊಪ್ಪಳ 23: ಮಕ್ಕಳ ಹಕ್ಕುಗಳ ಪೋಷಣೆ ಹಾಗೂ ರಕ್ಷಣೆಯ ಬಗ್ಗೆ ಮಕ್ಕಳಿಗೆ ಜಾಗೃತಿಯನ್ನು ಮೂಡಿಸಿ, ಮಕ್ಕಳು ಯಾವುದೇ ರೀತಿಯ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗದಂತೆ ಮಾಡುಬೇಕು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ  ಟಿ. ಶ್ರೀನಿವಾಸ ರವರು ಹೇಳಿದರು.  

ಕೊಪ್ಪಳ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇವರ ಸಹಯೋಗದಲ್ಲಿ ನಗರದ ಶ್ರೀ ಗವಿಸಿದ್ದೇಶ್ವರ ಉಚಿತ ವಸತಿ ಮತ್ತು ಪ್ರಸಾದ ನಿಲಯದಲ್ಲಿ (ಸೆ.21) ನಡೆದ ಕಾನೂನು ಜಾಗೃತಿ ಕಾರ್ಯಕ್ರಮ" ವನ್ನು ಸಸಿಗೆ ನೀರನ್ನು ಎರೆಯುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  

ಶೈಕ್ಷಣಿಕ ಉದ್ದೇಶಕ್ಕಾಗಿ, ಪೋಷಣೆ ಮತ್ತು ರಕ್ಷಣೆಗಾಗಿ ಅಥವಾ ಇನ್ನಾವುದೋ ಕಾರಣಕ್ಕಾಗಿ, ಕೌಟುಂಬಿಕ ವಾತಾವರಣ ದಿಂದ ಮಕ್ಕಳು ಸಾಂಸ್ಥಿಕ ಪೋಷಣೆಗಾಗಿ ವಿವಿಧ ಪಾಲನಾ ಸಂಸ್ಥೆಗಳಿಗೆ ದಾಖಲಾಗುತ್ತಿದ್ದಾರೆ.  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ನೀಡಿರುವ ಪ್ರಕರಣಗಳು ಮತ್ತು ವಸತಿ ನಿಲಯದ ಮಕ್ಕಳನ್ನು ಕೇಲ ವ್ಯಕ್ತಿಗಳು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡ ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಸಾಂಸ್ಥಿಕ ಪೋಷಣೆಯಲ್ಲಿರುವ ಮಕ್ಕಳು ಮೇಲೆಯು ಸಹ, ಸಂಸ್ಥೆಯಲ್ಲಿನ ಅಧಿಕಾರಿ, ಸಿಬ್ಬಂದಿ, ವ್ಯವಸ್ಥಾಪನಾ ಸಮಿತಿ, ಆಡಳಿತ ಮಂಡಳಿಗಳಿಂದ ವಿವಿಧ ರೀತಿಯ ಕಿರುಕುಳ, ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಅಥವಾ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗಿ ವರದಿಯಾಗಿಲ್ಲದಿರಬಹುದಾಗಿದೆ. ಆದ್ದರಿಂದ ಪೋಷಣೆ ಮತ್ತು ರಕ್ಷಣೆಯಲ್ಲಿರುವ ಮಕ್ಕಳಿಗೂ ಸಹ ಮಕ್ಕಳ ಹಕ್ಕುಗಳ ಕುರಿತು ಜಾಗೃತಿಯನ್ನು ಮೂಡಿಸಿ, ತನ್ಮೂಲಕ ಮಕ್ಕಳು ಯಾವುದೇ ರೀತಿಯ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗದಂತೆ ಮಾಡುವದು ಈ ಕಾರ್ಯಕ್ರಮದ ಉದ್ದೇಶವೆಂದು ತಿಳಿಸುತ್ತಾ, ಭಾದಿತರಿಗೆ, ನೊಂದವರಿಗೆ, ಕಾನೂನು ಸೇವಾ ಪ್ರಾಧಿಕಾರದಿಂದ, ಕಾನೂನುನಾತ್ಮಕ ರೀತಿಯ ಯಾವುದೇ ನೆರವು ಬೇಕಾದಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಅಥವಾ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪಕರ್ಿಸಬಹುದೆಂದು ತಿಳಿಸಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣ ಪಂಚಾಳ್ರವರು ಮಾತನಾಡಿ, ಮಕ್ಕಳು, ಮಕ್ಕಳ ಕಲ್ಯಾಣ ಸಮಿತಿಯಿಂದ ಪೋಷಣೆ ಮತ್ತು ರಕ್ಷಣೆಗಾಗಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಾದ ಮಕ್ಕಳಿಗೆ, ಕೇಂದ್ರ ಸರಕಾರವು "ಉನ್ನತಿ-ಶಿಷ್ಯವೇತನ" ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ, ಮಕ್ಕಳ ಪಾಲನಾ ಕೇಂದ್ರಗಳಲ್ಲಿನ ಮಕ್ಕಳಿಗೂ ಸಹ ಗುಣಾತ್ಮಕ ಶಿಕ್ಷಣ ನೀಡುವದಾಗಿದ್ದು, ಪಾಲನಾ ಕೇಂದ್ರಗಳಲ್ಲಿನ ಸೌಲಭ್ಯಗಳನ್ನು ಉತ್ತಮಪಡಿಸುವ ಮೂಲಕ ಮಕ್ಕಳ ಬೆಳವಣಿಗೆಯನ್ನು ಸಾಧಿಸುವದಾಗಿದೆ ಎಂದು ಹೇಳಿದರು.  

ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ರವರು ಮಾತನಾಡಿ, ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಮತ್ತು ತಿದ್ದುಪಡಿ ಕಾಯ್ದೆ-2019ರ ಕುರಿತು ಮಾಹಿತಿಯನ್ನು ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನಗೌಡ್ರ ಬಾಳನಗೌಡ್ರ ವಹಿಸಿದ್ದರು.  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜಕಾರ್ಯಕರ್ತ ರವಿಕುಮಾರ ಪವಾರ ಪ್ರಸ್ತಾವಿಕವಾಗಿ ಮಾತನಾಡಿದರು. ಗವಿಸಿದ್ದಪ್ಪ ಹತ್ತಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.