ಅಂತು ಇಂತು ಕಂಪ್ಲಿ ತಾಲ್ಲೂಕಿನಲ್ಲಿ ಮಳೆಬಂತು: ಬಿಸಿಲಿನಿಂದ ಕಂಗೆಟ್ಟಿದ ಭೂಮಿಗೆ ತಂಪೆರೆದ ವರುಣ

ಅಂತು ಇಂತು ಕಂಪ್ಲಿ ತಾಲ್ಲೂಕಿನಲ್ಲಿ ಮಳೆಬಂತು: ಬಿಸಿಲಿನಿಂದ ಕಂಗೆಟ್ಟಿದ ಭೂಮಿಗೆ ತಂಪೆರೆದ ವರುಣ  Rain finally arrives in Kampli Taluk: Rain god brings relief to the parched land

ಲೋಕದರ್ಶನ ವರದಿ 

ಕಂಪ್ಲಿ  19: ಕಳೆದ ಹಲವು ದಿನಗಳಿಂದ ಬಿರುಬಿಸಲಿನಿಂದ ಕಂಗೆಟ್ಟಿದ್ದ ಭೂಮಿಗೆ ಮತ್ತು ಜನತೆಗೆ ಸಂಜೆ ಸುರಿದ ಮಳೆ ತಂಪೆರೆಚಿದ ಜೊತೆಗೆ ರೈತರಲ್ಲಿ ಸಂತಸವನ್ನು ತಂದಿದೆ. ಮಳೆಗಾಲದಲ್ಲಿಯೂ ಬೇಸಿಗೆಯಂತ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಇದೇನು ಮಳೆಗಾಲವೋ ಬೇಸಿಗೆ ಕಾಲವೋ ಎಂದು ಪ್ರಶ್ನಿಸುವಂತಾಗಿತ್ತು.

ಮುಂಗಾರು ಮಳೆಗಳ ಕೈಕೊಟ್ಟಿದ್ದರಿಂದ ಎಲ್ಲಾ ರೀತಿಯಲ್ಲೂ ತೊಂದರೆ ಅನುಭವಿಸುವಂತಾಗಿತ್ತು. ಒಂದೆಡೆ ಬೀಳುಬಿದ್ದ ಭೂಮಿಗಳು, ಇನ್ನೊಂದೆಡೆ ಬಿಸಿಲಿನ ತಾಪಇದರಿಂದ ಕೃಷಿ ಚಟುವಟಿಕೆಗಳಿಗೂ ಅಡಚಣೆಯಾಗಿತ್ತು. ಈ ಮುಂಚೆ ಬಿದ್ದಿದ್ದ ಅಲ್ಪಸ್ವಲ್ಪ ಮಳೆಗೆ ಬಿತ್ತಿದ್ದ ಹಾಗೂ ಮಳೆಯನ್ನು ನಂಬಿ ನಾಟಿ ಮಾಡಿದ ಬೆಳೆಗಳು ಬಾಡುತ್ತಿದ್ದು,

ಅಲ್ಲಲ್ಲಿ ಭೂಮಿಯೂ ಬಿರುಕು ಬಿಡಲಾರಂಭಿಸಿದ್ದವು. ಮಳೆಯಿಲ್ಲದೆ ಜನ ಜಾನುವಾರುಗಳ ಕುಡಿಯುವ ನೀರಿಗೂ ಅಭಾವ ಎದುರಾಗಿದ್ದಲ್ಲದೆ, ಸದಾ ನೀರಿನಿಂದ ತುಂಬಿರುತ್ತಿದ್ದ ತುಂಗಭದ್ರೆಯ ಒಡಲು ಬರಿದಾಗಿದ್ದು, ನದಿಯ ಒಡಲು ಒಣಗಿ ನದಿಯಲ್ಲಿನ ಜಲಚರಗಳು ಸಹಿತ ಸಾವನ್ನಪ್ಪಿದ್ದವು. ಜನ ಜಾನುವಾರುಗಳಿಗಾಗಿ ನದಿ ಕಾಲುವೆಗಳಿಗೆ ನೀರು ಬಿಡುವಂತೆ ರೈತರು ಸಾರ್ವಜನಿಕರು ನದಿಯಲ್ಲಿಯೇ ಪ್ರತಿಭಟನೆ ನಡೆಸಿದ್ದರು. 

ರೈತರು ಮತ್ತು ಸಾರ್ವಜನಿಕರ ಕೂಗು ವರುಣ ದೇವನಿಗೆ ಕೇಳಿಸಿದೆ ಎನ್ನುವಂತೆಯೇ ಇಂದು ಸಂಜೆ ಪುನರ್ವಸು ಮಳೆ ಸುಮಾರು ಅರ್ಧ ಗಂಟೆ ಕಾಲಗಳ ಕಾಲ ಉತ್ತಮವಾಗಿ ಸುರಿದ್ದರಿಂದ ತಂಪೆರೆದಿದೆ. 

ಸಂಜೆ ಮಳೆ ಸುರಿದ್ದರಿಂದ ಶಾಲೆ ಕಾಲೇಜುಗಳಿಗೆ ತೆರಳಿದ, ಕೆಲಸ ಕಾರ್ಯಗಳಿಗೆ ತೆರಳಿದವರು ಮಳೆಯಲ್ಲಿಯೇ ತೋಯಿಸಿಕೊಂಡು ಬರುವ ದೃಶ್ಯ ಸಮಾನ್ಯವಾಗಿತ್ತು. ಅಂತು, ಇಂತು ಕಂಪ್ಲಿ ತಾಲ್ಲೂಕಿನಲ್ಲಿ ಮಳೆ ಬಂದಿದ್ದು, ಇನ್ನು ಮುಂದಿನ ದಿನಗಳು ಸಹಿತ ಹೀಗೆ ನಿರಂತರವಾಗಿ ಮಲೆ ಸುರಿಯಲಿ ಎಂದು ಸಾರ್ವಜನಿಕರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. 

ತುಂತುರು ಮಳೆ : ಶನಿವಾರದಂದು ಮುಕ್ಕಾಲು ತಾಸು ಮಳೆ ಸುರಿದಿದ್ದು, ಮರುದಿನವಾದ ಭಾನುವಾರದಂದು ಬೆಳಿಗ್ಗೆಯಿಂದಲೇ ಸೂರ್ಯನನ್ನು ಮರೆಮಾಚಿ, ಬಿಳಿ ಮೋಡದಿಂದ ತುಂತುರು ಮಳೆಯಾಗುತ್ತಿದೆ.

ಈ ಮಳೆಗೆ ಜನರು ಹೊರಗಡೆ ಬಾರದೇ, ಮನೆಯಲ್ಲೇ ಠಿಕಾಣಿ ಹೂಡಿರುವುದು ಕಂಡು ಬಂತು. ಇನ್ನೂ ಕೆಲವರು ಅನಿವಾರ್ಯತೆಯಿಂದ ಮಳೆ ಲೆಕ್ಕಿಸದೇ, ದಿನನಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.  ಕಾಮನ ಬಿಲ್ಲು : ತುಂತುರು ಮಳೆಯ ನಡುವೆ ಸೂರ್ಯನ ಸುತ್ತಲು ಕಾಮನಬಿಲ್ಲು ಕಾಣಿಸಿದ್ದು, ನೋಡುಗರ ಗಮನ ಸೆಳೆಯಿತು.