ನಟ ಸಲ್ಮಾನ್‌ ಖಾನ್‌ಗೆ ರಾಯಚೂರು ಯುವಕನಿಂದ ಜೀವ ಬೆದರಿಕೆ

ರಾಯಚೂರು 13:  ನಟ ಸಲ್ಮಾನ್ ಖಾನ್ ಹಾಗೂ ಅವರ ಸಿನಿಮಾದ ಗೀತೆ ರಚನೆಕಾರನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮಾನ್ವಿ ಪಟ್ಟಣದ ವಾರ್ಡ್‌ ನಂ 5, ಶಾದಿ ಮಹಲ್ ಹತ್ತಿರದ ನಿವಾಸಿ, ಸೊಹೆಲ್ ಪಾಷಾ (23) ಎನ್ನುವವನನ್ನು ಮುಂಬೈ ಪೊಲೀಸರು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರದ ಗೀತ ರಚನೆಕಾರನಾಗಿರುವ ಸುಹೇಲ್‌, ತನ್ನ ಹೊಸ ಹಾಡನ್ನು ಜನಪ್ರಿಯ ಮಾಡುವ ನಿಟ್ಟಿನಲ್ಲಿ ಇಂಥದ್ದೊಂದು ಬೆದರಿಕೆ ಹಾಕಿದ್ದ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ನ.7ರಂದು ಮುಂಬೈ ಸಂಚಾರಿ ಪೊಲೀಸರ ನಿಯಂತ್ರಣ ಕೊಠಡಿಯ ವಾಟ್ಸಾಪ್‌ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದ ಸುಹೇಲ್‌,ರೂ.5 ಕೋಟಿ ಕೊಡದಿದ್ದರೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುವುದು, ಅಲ್ಲದೇ ‘ಮೈ ಸಿಕಂದರ್‌ ಹೂಂ' ಹಾಡು ಬರೆದವರನ್ನೂ ಹತ್ಯೆ ಮಾಡಲಾಗುವುದು’ ಎಂದು ಬೆದರಿಕೆ ಹಾಕಿದ್ದ. ಸಂದೇಶ ಬಂದ ವಾಟ್ಸಾಪ್‌ ಸಂಖ್ಯೆ ಬೆನ್ನಟ್ಟಿದ ಮುಂಬೈ ಪೊಲೀಸರಿಗೆ ಬೆದರಿಕೆ ಕರೆಗೆ ಬಳಸಿದ ಫೋನ್ ನಂಬರ್ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ವೆಂಕಟೇಶ ನಾರಾಯಣ ಎಂಬುವವರಿಗೆ ಸೇರಿದ್ದನ್ನು ಪತ್ತೆ ಹಚ್ಚಿದ್ದರು. ವೆಂಕಟೇಶ ನಾರಾಯಣ ಅವರನ್ನು ವಿಚಾರಣೆಗೊಳಪಡಿಸಿದಾಗ ಅವರ ಫೋನ್ ಗೆ ಇಂಟರ್ನೆಟ್ (ಡಾಟಾ) ಬಳಕೆಯಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.

ಈ ಬಗ್ಗೆ ಅವರನ್ನು ವಿಚಾರಿಸಿದಾಗ ಅಪರಿಚಿತನೊಬ್ಬ ಕರೆ ಮಾಡುವ ಉದ್ದೇಶದಿಂದ ತನ್ನ ಮೊಬೈಲ್‌ ಪಡೆದಿದ್ದ ಎಂದು ವೆಂಕಟ್‌ ತಿಳಿಸಿದ್ದರು. ಜೊತೆಗೆ ಮೊಬೈಲ್‌ ಪರಿಶೀಲನೆ ವೇಳೆ ಮೊಬೈಲ್‌ಗೆ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಲು ಒಟಿಪಿ ಬಂದಿದ್ದ ವಿಷಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ತೆರಳಿದಾಗ ಆರೋಪಿ ಸುಹೇಲ್‌, ನಾರಾಯಣ ಅವರ ಮೊಬೈಲ್‌ ಸಂಖ್ಯೆ ಬಳಸಿ ತನ್ನ ಮೊಬೈಲ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಿದ್ದ. ಇದಕ್ಕಾಗಿಯೇ ಆತ ವೆಂಕಟ್‌ ಅವರ ಮೊಬೈಲ್‌ ಪಡೆದು ಅದರ ಮೂಲಕ ಒಟಿಪಿ ಪಡೆದುಕೊಂಡಿದ್ದ ಎಂಬುದು ಖಚಿತಪಟ್ಟಿತ್ತು.

ಈ ಸುಳಿವಿನ ಆಧಾರದ ಮೇಲೆ ಮಾನ್ವಿಗೆ ತೆರಳಿದ ಪೊಲೀಸರು ಸುಹೇಲ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತನ್ನ ಹೊಸ ಹಾಡು 'ಮೈ ಸಿಕಂದರ್‌ ಹೂಂ’ ಜನಪ್ರಿಯಗೊಳಿಸುವ ಸಲುವಾಗಿ ಸಂದೇಶ ಕಳಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.