ನವದೆಹಲಿ, ಜ.9, ಭಾರತದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಸಿಕ್ಕ ಅವಕಾಶವನ್ನು ಬಳಸಿಕೊಂಡ ಕಾರಣ ಆರಂಭಿಕ ಶಿಖರ್ ಧವನ್ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ತಿಳಿಸಿದ್ದಾರೆ.
ಧವನ್ ಗಾಯಕ್ಕೆ ತುತ್ತಾಗಿದ್ದರಿಂದ ಮೈದಾನಕ್ಕೆ ಇಳಿದಿರಲಿಲ್ಲ. ಗಾಯದಿಂದ ಚೇತರಿಸಿಕೊಂಡ ಬಳಿಕ ಶ್ರೀಲಂಕಾ ವಿರುದ್ಧದ ಸರಣಿಗೆ ತಂಡಕ್ಕೆ ಮರಳಿರುವ ಧವನ್ ಉತ್ತಮವಾಗಿ ಬ್ಯಾಟ್ ಮಾಡಿದರು. ಧವನ್ 29 ಎಸೆತಗಳಲ್ಲಿ 32 ರನ್ ಬಾರಿಸಿದರೆ, ರಾಹುಲ್ 32 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 45 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಜಯ ಸಾಧಿಸಿತ್ತು. ಟೀಮ್ ಇಂಡಿಯಾದ ಸೀಮಿತ ಓವರ್ ಗಳ ತಂಡದ ಉಪನಾಯಕ ರೋಹಿತ್ ಗೆ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.
“ರಾಹುಲ್ ಭರ್ಜರಿ ಲಯದಲ್ಲಿದ್ದಾರೆ. ಇವರ ಬ್ಯಾಟ್ ಮಾಡುವ ಧಾಟಿ ನೋಡಿದರೆ, ಟೆಸ್ಟ್ ಪಂದ್ಯದಲ್ಲೂ ಇದೇ ರೀತಿ ಆಡಬೇಕು. ಟೆಸ್ಟ್ ನಲ್ಲೂ ರಾಹುಲ್ ಅವರು 50 ಎಸೆತಗಳಲ್ಲಿ ಮೂರಂಕಿ ಮುಟ್ಟುವ ಕ್ಷಮತೆ ಹೊಂದಿರುವ ಆಟಗಾರ. ಅವರ ಹೊಡೆತಗಳ ಆಯ್ಕೆ ಸಹ ಉತ್ತಮವಾಗಿದೆ” ಎಂದಿದ್ದಾರೆ.
“ಗಾಯದ ಛಾಯೆ ಇನ್ನು ಸಹ ಅವರ ಬ್ಯಾಟಿಂಗ್ ನಲ್ಲಿ ಕಾಣುತ್ತಿದೆ. ಮುಂದಿನ ಪಂದ್ಯದಲ್ಲಿ ಬ್ಯಾಟ್ ಮಾಡುವಾಗ ಉತ್ತಮ ರೀತಿಯಿಂದ ಆಡಿ ತಂಡದ ಗೆಲುವಿನಲ್ಲಿ ಮಿಂಚಲಿ” ಎಂದು ಗಂಭೀರ್ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿರುವ ಶಿಖರ್ ಧವನ್ ಒತ್ತಡವನ್ನು ಅನುಭವಿಸುವರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಮ್, “ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಹೋಲಿಕೆ ಮಾಡಬಾರದು. ಐಪಿಎಲ್ ನಲ್ಲಿ ಆಡುವಾಗ ಒತ್ತಡ ಇರುವುದಿಲ್ಲ. ದೇಶದ ಪರ ಆಡುವಾಗ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರೆ, ಯುವಕರು ಅವಕಾಶದ ಲಾಭ ಪಡೆಯಲು ಹೊಂಚು ಹಾಕಿಕೊಂಡು ಕುಳಿತಿರುತ್ತಾರೆ” ಎಂದಿದ್ದಾರೆ.