ಮೀರತ್, ಡಿ 24 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ
ಮೃತಪಟ್ಟವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ
ಅವರ ಸಹೋದರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬರಿಗೈಯಲ್ಲಿ ದೆಹಲಿಗೆ ಮರಳಿದ್ದಾರೆ. ಮೀರತ್ ನಲ್ಲಿ ನಿಷೇಧಾಜ್ಞೆ ಜಾರಿಯಿದ್ದ ಹಿನ್ನೆಲೆಯಲ್ಲಿ
ಪೊಲೀಸ್ ಅಧಿಕಾರಿಗಳು ಇವರಿಗೆ ಒಳಪ್ರವೇಶಿಸಲು ಅನುಮತಿ ನೀಡಲಿಲ್ಲ. ಈ ಹಿಂದೆಯೇ ರಾಹುಲ್ ಗಾಂಧಿ ಮೃತರ
ಕುಟುಂಬ ಸದಸ್ಯರ ಭೇಟಿಗೆ ಅನುಮತಿ ಕೇಳಿದ್ದರೂ, ಜಿಲ್ಲಾಡಳಿತ ಅದನ್ನು ನಿರಾಕರಿಸಿತ್ತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ
ಪೊಲೀಸ್ ಅಧಿಕಾರಿಗಳು ಯಾವುದೇ ನಿರ್ಬಂಧದ ದಾಖಲೆಗಳನ್ನು ತೋರಿಸಲಿಲ್ಲ. ಬದಲಿಗೆ ಮರಳಿ ಹೋಗುವಂತೆ ಮನವಿ
ಮಾಡಿದರು. ಆದ್ದರಿಂದ ನಾವು ಯಾವುದೇ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡದೆ ಮರಳಿ ಬಂದೆವು
ಎಂದರು. ಪೊಲೀಸ್ ವರಿಷ್ಠಾಧಾರಿ ಅಜಯ್ ಸಹಾನಿ, ಗಾಂಧಿ
ಸಹೋದರರಿಗೆ ನಿರ್ಬಂಧದ ಕುರಿತು ಮಾಹಿತಿ ನೀಡಿದೆವು. ಅವರು ಯಾವುದೇ ಪ್ರತಿಭಟನೆ ನಡೆಸದೆ, ಆದೇಶವನ್ನು
ಪಾಲಿಸಿದರು ಎಂದರು. ಆದರೆ, ಸ್ಥಳೀಯ ಕಾಂಗ್ರೆಸ್
ನಾಯಕ ಇಮ್ರಾನ್ ಮಸೂದ್, ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ನಾಯಕರನ್ನು ತಡೆಗಟ್ಟುತ್ತಿದ್ದಾರೆ
ಎಂದು ಆರೋಪಿಸಿದ್ದಾರೆ.